ಬೆಳ್ತಂಗಡಿ: ಕರಾವಳಿಯಲ್ಲಿ ಗುಳಿಗ ದೈವದ ಕೋಲ ಸೇವೆಯೇ ವಿಶಿಷ್ಟ. ಅಬ್ಬರ, ಆರ್ಭಟಕ್ಕೆ ಗುಳಿಗನಿಗೆ ಗುಳಿಗನೇ ಸಾಟಿ!.
ಅಂಥದ್ರಲ್ಲಿ ಒಂದೇ ಬಾರಿಗೆ ಒಂಬತ್ತು ಗುಳಿಗ ದೈವಗಳು ಅಬ್ಬರಿಸಲು ತೊಡಗಿದರೆ ಹೇಗಿರಬೇಡ. ಹೌದು, ಕರಾವಳಿಯ ಇತಿಹಾಸದಲ್ಲೇ ಅತ್ಯಂತ ವಿಶೇಷವಾಗಿರುವ ಇಂಥ ವಿದ್ಯಮಾನ ವರ್ಷಕ್ಕೊಮ್ಮೆ ಜರುಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ನಿಟ್ಟೆಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ, ಶ್ರೀ ನವಗುಳಿಗ ಕ್ಷೇತ್ರದಲ್ಲಿ ನಡೆಯುವ ಒಂಬತ್ತು ಗುಳಿಗ ದೈವಗಳ ಏಕಕಾಲದ ಸೇವೆ ತುಳುನಾಡಿನಲ್ಲಿ ಅತಿ ವಿಶಿಷ್ಟ ಸೇವೆಗಳಲ್ಲಿ ಒಂದು.
ಈ ಬಾರಿಯ ವಾರ್ಷಿಕ ಉತ್ಸವ ಶುಕ್ರವಾರ ರಾತ್ರಿ ನಡೆದಿದ್ದು, ಒಂಬತ್ತು ಗುಳಿಗ ದೈವಗಳ ಗಗ್ಗರ ಸೇವೆ ನೋಡುವುದೇ ಕಣ್ಣಿಗೆ ಹಬ್ಬ. ಒಟ್ಟಿಗೆ ಅಬ್ಬರಿಸುತ್ತಲೇ ಗಗ್ಗರದ ಜೊತೆಗೆ ಹಾರಾಟ ನಡೆಸುವ ಗುಳಿಗ ದೈವಗಳ ಈ ರೀತಿಯ ನರ್ತನವಾಗಲಿ, ಅರಚಾಟವಾಗಲೀ ಬೇರೇಲ್ಲೂ ಕಂಡು ಬರುವುದಿಲ್ಲ. ಅತಿ ವಿಶೇಷ ಎನ್ನಿಸಿರುವ ಈ ಕೋಲ ಸೇವೆಯನ್ನು ನೋಡಲು ಕರಾವಳಿಯ ಉದ್ದಗಲದಿಂದ ಜನ ಬರುತ್ತಾರೆ. ಕೆಲವರು ಕುತೂಹಲದಿಂದ ಬಂದರೆ, ಇನ್ನು ಕೆಲವರು ಭಕ್ತಿ ಭಾವದಿಂದ ಬಂದು ಗುಳಿಗನ ಅಬ್ಬರದ ಅಚ್ಚರಿಗೆ ಸಾಕ್ಷಿಯಾಗುತ್ತಾರೆ. ಹೀಗಾಗಿ ಬರ್ಕಜೆ ಎಂಬ ಈ ಊರು ನವಗುಳಿಗರ ರೋಮಾಂಚಕ ಕೋಲ-ನೇಮೋತ್ಸವಕ್ಕೆ ತುಂಬಾ ಪ್ರಸಿದ್ಧಿ ಪಡೆದಿದೆ.
Kshetra Samachara
06/02/2021 04:27 pm