ಮಂಗಳೂರು: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಪನೋಲಿಬೈಲು ಹೆಸರನ್ನು ಕೇಳದೆ ಇರುವವರು ಕರಾವಳಿಯಲ್ಲಿ ಬಹು ವಿರಳ. ಈ ಕ್ಷೇತ್ರದ ಹೆಸರಲ್ಲೇ ಒಂದು ರೀತಿಯ ಭಯ ಭಕ್ತಿ ಶ್ರದ್ಧೆ ಇದೆ.
ಈ ಕ್ಷೇತ್ರ ಅತಿ ಕಾರಣಿಕದ ದೈವಸ್ಥಾನವಾಗಿದೆ. ಪನೋಲಿಬೈಲು ಸುಮಾರು 400 ಕ್ಕೂ ಹೆಚ್ಚು ಇತಿಹಾಸವಿರುವ ದೈವಸ್ಥಾನಗಳಲ್ಲಿ ಒಂದಾಗಿದೆ. ಉಪ್ಪಿನಂಗಡಿಯ ವೈಲಾಯ ಎಂಬವರ ಕುಲದೇವರಾಗಿ ಬೆಳಗಿದ ಕಲ್ಲುರ್ಟಿ ಕಲ್ಕುಡರೆಂಬ ಎರಡು ದೈವ ಶಕ್ತಿಗಳು ಶ್ರೀ ಕ್ಷೇತ್ರ ಪನೋಲಿಬೈಲಿನಲ್ಲಿ ನೆಲೆಯಾದರು ಎಂಬುದು ಇಲ್ಲಿನ ಚಾರಿತ್ರ್ಯ. ಪನೋಲಿಬೈಲ್ ಕ್ಷೇತ್ರದಲ್ಲಿ ಅನೇಕ ಕಾರಣಿಕಗಳು ನಡೆದಿದೆ, ಇಂದಿಗೂ ನಡೆಯುತ್ತಲೇ ಇದೆ. ಭಕ್ತರು ನೀಡುವ ಅಗೇಲು ಸೇವೆ ದಾಖಲೆಯ ಪುಟ ಸೇರಿದೆ.
ಈ ದೈವೀ ಕ್ಷೇತ್ರವನ್ನು ನಂಬಿ ಅದೆಷ್ಟೋ ನೊಂದ ಜೀವಗಳು ಈ ತಾಯಿಯ ಹೆಸರನ್ನು ಹೇಳಿ ಜೀವನ ನಡೆಸುತ್ತಿದ್ದಾರೆ. ಮನೆಯಲ್ಲಿ ಕಷ್ಟ, ಅನಾರೋಗ್ಯ, ಕಂಕಣಭಾಗ್ಯ, ಆಸ್ತಿ ವಿಚಾರದಲ್ಲಿ ತಕರಾರು ಇದ್ದವರು ಇಲ್ಲಿಗೆ ಹರಕೆ ಹೇಳಿದರೆ ಸಾಕು, ಕ್ಷಣ ಮಾತ್ರದಲ್ಲಿ ನೆನೆದ ಕೆಲಸ ಕೈಗೂಡಿದ ನಿದರ್ಶನಗಳಿವೆ. ಇಂದಿಗೂ ಕೂಡ ಅದು ನಡೆಯುತ್ತಿದೆ ಎಂಬುದೇ ಪವಾಡ. ಆದ್ದರಿಂದಲೇ ಪನೋಲಿಬೈಲ್ ಕ್ಷೇತ್ರಕ್ಕೆ ಭಕ್ತರ ದಂಡೇ ಅಗಮಿಸುತ್ತದೆ.
ನಿನ್ನೆ ರಾತ್ರಿ ನಡೆದ ವರ್ಷಾವಧಿ ಕೋಲೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುನೀತರಾದರು.
Kshetra Samachara
26/11/2020 11:58 am