ಕಾರ್ಕಳ : ಕಾರ್ಕಳದಿಂದ ಸುರತ್ಕಲ್ ಕಡೆಗೆ ಪ್ರಯಾಣಿಸುವವರು ಎರಡು ಕಡೆ ಟೋಲ್ ಪಾವತಿಸುವ ದುಸ್ಥಿತಿ ಕಳೆದ 6 ವರ್ಷಗಳಿಂದ ಇದೆ. ಆರು ತಿಂಗಳ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊAಡ ಸುರತ್ಕಲ್ ಟೋಲ್ ಗೇಟ್ ಸತತ ಹೋರಾಟಗಳ ಹೊರತಾಗಿಯೂ ಮುಂದುವರಿಯಲು ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ನೇರಕಾರಣ ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಆರೋಪಿಸಿದ್ದಾರೆ.
ಅವರು ಕಾರ್ಕಳದ ಬಸ್ಸು ಏಜೆಂಟರ ಕಚೇರಿಯಲ್ಲಿ ಅ.18 ರಂದು ನಡೆಯಲಿರುವ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ಅಕ್ಟೋಬರ್ 18 ರಂದು ನಡೆಯುವ ಟೋಲ್ ಗೇಟ್ ತೆರವು ಮುತ್ತಿಗೆ ಹೋರಾಟ ಎರಡೂ ಜಿಲ್ಲೆಗಳಿಗೆ ಮಹತ್ವದ ಹೋರಾಟವಾಗಿದ್ದು ಕಾರ್ಕಳ ಭಾಗದ ಜನರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಮಾತನಾಡಿ, 6 ವರ್ಷಗಳ ಸತತ ಹೋರಾಟದ ಫಲವಾಗಿ ಸರಕಾರ ಸುರತ್ಕಲ್ ಟೋಲ್ ಗೇಟ್ ತೆರವಿನ ನಿರ್ಣಯ ತೆಗೆದುಕೊಂಡಿದೆ. ಆದರೆ ನಿರ್ಣಯ ಜಾರಿಮಾಡದೆ ಜನರ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ಸರಕಾರ ಹಾಗು ಜನಪ್ರತಿನಿಧಿಗಳ ಇಂತಹ ಜನವಿರೋಧಿತನದ ವಿರುದ್ದ ನಿರ್ಣಾಯಕ ಹೋರಾಟ ಅನಿವಾರ್ಯ ಎಂದರು.
ಟೋಲ್ ವಿರುದ್ದದ ಪೋಸ್ಟರನ್ನು ಬಸ್ಸ್ ಏಜೆಂಟರ ಬಳಗದ ಗೌರವಾದ್ಯಕ್ಷರಾದ ಸುರೇಶ್ ದೇವಾಡಿಗ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಎಜೆಂಟರ ಬಳಗದ ಅದ್ಯಕ್ಷ ಹರೀಶ್ ಪೂಜಾರಿ, ಸದಸ್ಯರುಗಳಾದ ಸದಾನಂದ ನಾಯಕ್ ಬಾಲಕೃಷ್ಣ ದೇವಾಡಿಗ, ಟ್ಯಾಕ್ಸಿ ಯೂನಿಯನ್ ಪದಾಧಿಕಾರಿಗಳಾದ ಮುನೀರ್, ಇಮಾಮ್, ಲಕ್ಷಣ್, ಮೊದಲಾದವರು ಉಪಸ್ಥಿತರಿದ್ದರು.
ಇಕ್ಬಾಲ್ ಅಹ್ಮದ್ ಸ್ವಾಗತಿಸಿ ಧನ್ಯವಾದವಿತ್ತರು.
Kshetra Samachara
13/10/2022 12:00 pm