ಮುಲ್ಕಿ: ಸುರತ್ಕಲ್ ಎನ್‌ಐಟಿಕೆ ಅಕ್ರಮ ಟೋಲ್‌ಅನ್ನು ಅಕ್ಟೋಬರ್ 18ರಂದು ತೆರವುಗೊಳಿಸುವ ಬಗ್ಗೆ ಮುಲ್ಕಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸಮಾನ ಮನಸ್ಕರ ಹಾಗೂ ಟೋಲ್ ಗೇಟ್ ವಿರೋಧಿ ಹೋರಾಟಗಾರರ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಟೋಲ್ ವಿರೋಧಿ ಹೋರಾಟಗಾರ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿ ಟೋಲ್ ಗೇಟ್ ತೆರವಿಗೆ ಸರಕಾರ ಯಾಕೆ ಮೀನ ಮೇಷ ಎಣಿಸುತ್ತಿದೆ ಅಂತ ಗೊತ್ತಾಗುತ್ತಿಲ್ಲ. ಇದರಲ್ಲಿ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇದೆ, ಈ ನಡುವೆ ಟೋಲ್ ವಿರುದ್ದ ಅಭಿಯಾನ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸ ಕೂಡ ನಡೆಯುತ್ತಿದೆ ಎಂದು ಆರೋಪಿಸಿದರು. ಮುಂದಿನ ಹೋರಾಟ ತುಳುನಾಡಿನ ನಾಗರಿಕರು ಹಾಗೂ ಟೋಲ್ ಅಕ್ರಮಗಳಲ್ಲಿ ಭಾಗಿಯಾಗಿರುವ ಬಿಜೆಪಿ ಎಂಎಲ್ಎ ಎಂಪಿ ನಡುವಿನ ಹೋರಾಟವಾಗಿದ್ದು ಗೆಲುವು ನಮ್ಮದೇ ಎಂದರು.
ಮಾಜೀ ಸಚಿವ ಕೆ.ಅಭಯ ಚಂದ್ರ ಮಾತನಾಡಿ ಕೇಂದ್ರ ಸರಕಾರ ಎನ್ಐಟಿಕೆ ಟೋಲ್ ನ್ನು ಅಕ್ರಮ ಎಂದು ಹೇಳಿದರೂ ತೆರವಿಗೆ ಸರಕಾರ ಮೀನ ಮೇಷ ಎಣಿಸುತ್ತಿದೆ, ಟೋಲ್ ನಲ್ಲಿ ಬಿಜೆಪಿಯು ಗೂಂಡಾ ಸಂಸ್ಕೃತಿ ತೋರಿಸುತ್ತಿದೆ ನಮ್ಮದು ಶಾಂತಿಯುತ ಹೋರಾಟವಾಗಿದ್ದು ಜೈಲಿಗೆ ಹೋಗಲು ಸಿದ್ದ ಎಂದು ಘೋಷಿಸಿದರು. ಸರಕಾರದ ಅಕ್ರಮಗಳನ್ನು ಜನತೆಗೆ ತಿಳಿಸುವ ಹೋರಾಟ ಎಂದು ಹೇಳಿದ ಅವರು ಜನಪರ ಹೋರಾಟದಲ್ಲಿ ಖಂಡಿತ ಯಶಸ್ವಿಯಾಗುತ್ತೇವೆ ಎಂದರು.
ಸಭೆಯಲ್ಲಿ ಅಕ್ಟೋಬರ್ 18ರ ಅಕ್ರಮ ಟೋಲ್ ನೇರ ಕಾರ್ಯಾಚರಣೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ದಲಿತ ಸಂಘರ್ಷ ಸಮಿತಿಯ ಶೇಖರ ಹೆಜ್ಮಾಡಿ, ಮೋಹನ್ ಕೋಟ್ಯಾನ್, ವಸಂತ್ ಬೆರ್ನಾಡ್, ರೋಲ್ಫಿ ಡಿಕೋಸ್ಟ, ಶಾಹುಲ್ ಹಮೀದ್ ಬಜ್ಪೆ, ಮೂಸಬ್ಬ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/10/2022 07:36 pm