ಕಾರ್ಕಳ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಸಹಜ ಸಾವಲ್ಲ. ಇಸ್ಲಾಮಿಕ್ ಗೂಂಡಾಗಳು ಕಾಂಗ್ರೆಸ್ ಕುಮ್ಮಕ್ಕಿನಿಂದ ನಡೆಸಿರುವ ಅತ್ಯಂತ ಹೇಯಕೃತ್ಯ ಇದಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಅವರು ಕಾರ್ಕಳದ ಅಜೆಕಾರಿನಲ್ಲಿ ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪರೇಶ್ ಮೇಸ್ತಾ ಹತ್ಯೆ ಕಾಂಗ್ರೆಸ್ ಪ್ರೇರಿತ ಹತ್ಯೆಯಾಗಿದ್ದು, ಅಂದಿನ ಕಾಂಗ್ರೆಸ್ ಸರಕಾರ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿ ತನಿಖೆಯನ್ನು ಸಿಬಿಐಗೆ ವಹಿಸಿದ್ದರ ಪರಿಣಾಮ ಸಿಬಿಐ ಕಪೋಲಕಲ್ಪಿತ ವರದಿ ನೀಡುವಂತಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಗೆ ಪ್ರತ್ಯೇಕ ಪಕ್ಷ ಸ್ಥಾಪಿಸಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಕೋಟ್ಯಾಂತರ ಹಿಂದೂ ಕಾರ್ಯಕರ್ತರ ಪರವಾಗಿ ಅವರ ಧ್ವನಿಯಾಗಿ ಹೋರಾಟ ಮಾಡುವುದು ನಮ್ಮ ಸಂಘಟನೆಯ ಮೂಲಉದ್ದೇಶ. ರಾಜ್ಯದಲ್ಲಿ ಹಿಂದೂಪರ ಬಿಜೆಪಿ ಸರಕಾರವಿದ್ದರೂ ಹಿಂದೂಗಳಿಗೆ ರಕ್ಷಣೆಯಿಲ್ಲ ಎನ್ನುವ ಕಾರ್ಯಕರ್ತರ ಆಕ್ರೋಶವಿದೆ. ಅಲ್ಲದೇ ಅಸಂಖ್ಯಾತ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಚುನಾವಣೆಗೆ ಸ್ಪರ್ಧಿಸಬೇಕೆಂಬ ಒತ್ತಡವೂ ಇದೆ. ಅದರೆ ಸದ್ಯಕ್ಕೆ ಚುನಾವಣೆಯ ಸ್ಪರ್ಧೆಯ ಕುರಿತು ಯಾವುದೇ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆದ ಸಂದರ್ಭದಲ್ಲಿ ಹಿಂದೂಗಳ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದರೆ ನಮ್ಮನ್ನು ನಿರ್ಬಂಧಿಸುವ ಮೂಲಕ ರಾಜ್ಯ ಬಿಜೆಪಿ ಸರಕಾರ ಹಿಂದುತ್ವ ವಿರೋಧಿ ನೀತಿ ಅನುಸರಿಸುತ್ತಿದೆ.
ರಾಜ್ಯ ಬಿಜೆಪಿಯಲ್ಲಿ ಕೆಲವು ನಾಯಕರು ನನ್ನಿಂದಲೇ ಬಿಜೆಪಿ, ನಾನೇ ಕಟ್ಟಿ ಬೆಳೆಸಿದ ಬಿಜೆಪಿ ಎಂದು ಹೇಳಿಕೊಂಡು ತಿರುಗಾಡಿ ವೈಯಕ್ತಿಕ ಲಾಭಕ್ಕಾಗಿ ಪಕ್ಷವನ್ನು ಬಲಿಕೊಡುವ ಪ್ರಯತ್ನ ನಡೆಸುತ್ತಿದ್ದು, ಬಿಜೆಪಿ ಯಾರ ಅಪ್ಪನ ಮನೆಯ ಆಸ್ತಿಯೂ ಅಲ್ಲ. ಅದು ಕೋಟ್ಯಾಂತರ ಹಿಂದೂ ಕಾರ್ಯಕರ್ತರ ಪರಿಶ್ರಮ ಹಾಗೂ ರಕ್ತದ ಹನಿಗಳಿಂದ ಕಟ್ಟಿದ ಪಕ್ಷವೆಂದು ಪರೋಕ್ಷವಾಗಿ ಬಿಜೆಪಿಯ ನಾಯಕರಿಗೆ ಕುಟುಕಿದರು.
PublicNext
05/10/2022 07:26 pm