ಉಡುಪಿ: ಪಿಎಫ್ ಐ ಕಚೇರಿ ಹಾಗೂ ಮುಖಂಡರ ಮನೆ ಮೇಲೆ ಗುರುವಾರ ನಡೆದ ಎನ್.ಐ.ಎ. ದಾಳಿ ಹಾಗೂ ಬಂಧನ ಒಂದು ರಾಜಕೀಯ ಪ್ರೇರಿತ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದು ಪಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ಬಿ.ಎನ್. ಶಾಹಿದ್ ಅಲಿ ಟೀಕಿಸಿದ್ದಾರೆ.
ಎನ್ ಐಎಯಂತಹ ಸಾಂವಿಧಾನಿಕ ಸಂಸ್ಥೆ ಗಳ ದುರುಪಯೋಗ ಮತ್ತು ಪಿಎಫ್ ಐ ಸಂಘಟನೆಯ ನಾಯಕರ ಅನ್ಯಾಯದ ಬಂಧನವನ್ನು ವಿರೋಧಿಸಿ ದೇಶಾದ್ಯಂತ ನಿನ್ನೆ ಪಿಎಫ್‌ಐ ಪ್ರತಿಭಟನೆ ನಡೆಸಿದೆ. ಅಸಂವಿಧಾನಿಕ ಬಂಧನವನ್ನು ವಿರೋಧಿಸುವುದು ನಮ್ಮ ಸಾಂವಿಧಾನಿಕ ಹಕ್ಕು. ಅದರ ಭಾಗವಾಗಿ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಿಎಫ್ ಐ ಕಾರ್ಯಕರ್ತರ ಮೇಲೆ ಪೊಲೀಸರು ಯಾವುದೇ ಮುನ್ಸೂಚನೆ ನೀಡದೆ ಲಾಠಿ ಬೀಸಿದ್ದು ಹಾಗೂ "ಅವರಿಗೆ ಹೊಡೆಯಿರಿ, ಹೊಡೆಯಿರಿ' ಎಂದು ಪ್ರಚೋದನಾತ್ಮಕವಾಗಿ ಕೂಗಿದ ಕ್ರಮ ಪೊಲೀಸರ ಆಶಿಸ್ತು ಹಾಗೂ ದರ್ಪವನ್ನು ತೋರಿಸುತ್ತದೆ. ಪೊಲೀಸರ ಇಂತಹ ನಡೆ ಖಂಡನೀಯ. ತಪ್ಪಿತಸ್ಥ ಪೊಲೀಸರು ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟನೆ ಮೂಲಕ ಒತ್ತಾಯಿಸಿದ್ದಾರೆ.
Kshetra Samachara
23/09/2022 06:20 pm