ಉಡುಪಿ: ಕೊರೊನಾ ಬಂದ ಸಂದರ್ಭ ಕಾರ್ಕಳದಲ್ಲಿ ಬಿಜೆಪಿಯವರು ಉತ್ಸವ ಮಾಡಿದ್ದರು. ಸಂತ್ರಸ್ತರಿಗೆ ಪರಿಹಾರ ಮುಟ್ಟಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಆದರೆ, ಇದುವರೆಗೂ ಸಂತ್ರಸ್ತರಿಗೆ ಪರಿಹಾರ ತಲುಪಿಲ್ಲ. 2 ವರ್ಷಗಳ ಹಿಂದೆ ಬಂದ ಪ್ರವಾಹದ ಪರಿಹಾರವನ್ನೇ ಬಿಜೆಪಿ ಸರಕಾರ ಇಲ್ಲಿಯ ತನಕ ಕೊಟ್ಟಿಲ್ಲ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹರಿಹಾಯ್ದರು.
ಆಸ್ಕರ್ ಫೆರ್ನಾಂಡಿಸ್ ಅವರ ಸಂಸ್ಮರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸೊರಕೆ, ಪ್ರವಾಹ ಪೀಡಿತ ಪ್ರದೇಶಗಳ ಶಾಸಕರು ಸಮಾವೇಶದ ಹೆಸರಿನಲ್ಲಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಜನರ ಮೇಲೆ ಎಷ್ಟು ಕಳಕಳಿ ಇದೆ ಎಂಬುದು ಗೊತ್ತಾಗುತ್ತದೆ. ಇವತ್ತು ಅಬ್ಬರದ ಭಾಷಣವನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಮೂರ್ಖರನ್ನಾಗಿಸುವ ನಿರೀಕ್ಷೆಯಲ್ಲಿ ಬಿಜೆಪಿಯವರಿದ್ದಾರೆ. ಈ ವಿಚಾರದ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ಇದೆ, ಜನರು ಮೂರ್ಖರೇನಲ್ಲ ಎಂದರು.
ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟು ಉದ್ದದ ಪಾದಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದೆ. ಇವತ್ತು ಆಡಳಿತರೂಢ ಪಕ್ಷ ಧರ್ಮ - ಜಾತಿಗಳ ನಡುವೆ ವಿಭಜನೆ ಮಾಡುವಂತಹ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಂದು ಕುಟುಂಬ ಎನ್ನುವ ರೀತಿಯಲ್ಲಿ ಒಗ್ಗೂಡಿಸುತ್ತಿದೆ. ನಮ್ಮ ದೇಶದಲ್ಲಿ ವಿವಿಧ ಜಾತಿ- ಮತ ಭೇದದ ಜನರಿದ್ದು ಅವರನ್ನು ಸಂವಿಧಾನದ ಅಡಿಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
Kshetra Samachara
13/09/2022 07:35 pm