ಮಂಗಳೂರು: ಸ್ವಾತಂತ್ರ್ಯ ಬಂದಾಗಿನಿಂದ ಎಲ್ಲಾ ಆದರ್ಶ ಪುರುಷರ ಜೀವನವನ್ನು ಪಠ್ಯಪುಸ್ತಕದಲ್ಲಿ ಜೋಡಿಸಿದ್ದರೆ ಸಮಾಜದ ಹೊಸಪೀಳಿಗೆ ಅನುಭವದಿಂದ ಬೆಳೆಯಲು ಸಾಧ್ಯವಾಗುತ್ತಿತ್ತು. ಆದರೆ ಈ ಪ್ರಯತ್ನ ಆಗಲೇ ಇಲ್ಲ. ಕೇವಲ ಒಂದು ಪ್ಯಾರ, ಅರ್ಧಪುಟಗಳಿಗೆ ಸೀಮಿತಗೊಳಿಸಿ ಎಲ್ಲಾ ಮಹಾಪುರುಷರ ಆದರ್ಶಗಳನ್ನು ಮುಚ್ಚಿಡುವ ಪ್ರಯತ್ನಗಳಾಯಿತು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ನಮ್ಮ ಸರಕಾರದ ಒತ್ತಾಸೆಯಿಂದ ಹತ್ತು ಹಲವು ಮಹಾಪುರುಷರ ಜೀವನಾದರ್ಶ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಂಡಿದೆ. ಯಾವುದೇ ಮಹಾಪುರುಷರನ್ನು ಪೂಜೆಗಳಿಗೆ ಸೀಮಿತ ಮಾಡದೆ, ಅವರ ಆದರ್ಶಗಳನ್ನು ಅನುಷ್ಠಾನಕ್ಕೆ ತರುವಂತಹ ಕಾರ್ಯ ಮಾಡುವುದೇ ಅವರ ಜಯಂತಿಯಲ್ಲಿ ನೀಡುವಂತಹ ನಿಜವಾದ ಗೌರವ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಇಂದಿಗೂ ಪ್ರಸ್ತುತ. ನಮ್ಮ ನಾಡಿನ ಎಲ್ಲಾ ದಾರ್ಶನಿಕರು, ಮಹಾಪುರುಷರು ಸಮಾನತೆಯ ಸಂದೇಶವನ್ನು ಸಾರಿದರು. ಯಾರೂ ಒಂದು ಜಾತಿಯನ್ನು ಸೀಮಿತವಾಗಿರಿಸಿ ಸಂದೇಶ ನೀಡಿಲ್ಲ. ಆದರೆ ನಾವೆಲ್ಲರೂ ಎಲ್ಲಾ ದಾರ್ಶನಿಕರನ್ನು, ಅವರ ಆದರ್ಶಗಳನ್ನು ಒಂದೊಂದು ಜಾತಿಗೆ ಸೀಮಿತ ಮಾಡಿದ್ದೇವೆ. ನಾರಾಯಣ ಗುರುಗಳ ಆದರ್ಶ, ಚಿಂತನೆ ಒಂದು ಸಮುದಾಯಕ್ಕೆ ಸೀಮಿತವಾಗೊಲ್ಲ. ಅವರು ಆದರ್ಶದಲ್ಲಿ ರಾಷ್ಟ್ರೀಯ ಮಟ್ಟದ ಚಿಂತಕರು. ನಾರಾಯಣಗುರುಗಳು ಧರ್ಮ ವಾದದ ವಸ್ತುವಲ್ಲ ಎಂದು ಹೇಳಿರುವ ಮಾತು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಸಭಾಂಗಣವು ಖಾಲಿಖಾಲಿ ಸೀಟುಗಳಿಂದ ಭಣಗುಟ್ಟುತ್ತಿತ್ತು. ದೊಡ್ಡ ಮಟ್ಟದ ಬಿಲ್ಲವ ಸಮುದಾಯ ಇರುವ ಮಂಗಳೂರಿನಲ್ಲಿ ನಾರಾಯಣ ಗುರುಗಳ ಜಯಂತಿಯ ಕಾರ್ಯಕ್ರಮಕ್ಕೆ ಜನರನ್ನು ಸೆಳೆಯುವಲ್ಲಿ ಸರಕಾರ ಸೋತಂತಿದೆ.
PublicNext
11/09/2022 10:21 am