ಮಂಗಳೂರು: ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಆಗಿ ಜಯಾನಂದ ಅಂಚನ್ ಹಾಗೂ ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ. ಜಯಾನಂದ ಅಂಚನ್ 46 ಮತ ಗಳಿಸಿದರೆ, ಅವರ ಪ್ರತಿಸ್ಪರ್ಧಿ ಎಂ.ಶಶಿಧರ್ ಹೆಗ್ಡೆ 14 ಮತ ಪಡೆದರು. ಪೂರ್ಣಿಮಾ 46 ಮತ ಪಡೆದರೆ, ಅವರ ಪ್ರತಿಸ್ಪರ್ಧಿ ಝೀನತ್ ಸಂಶುದ್ದೀನ್ 14 ಮತವಷ್ಟೇ ಗಳಿಸಲು ಸಫಲವಾದರು.
ಜಯಾನಂದ ಅಂಚನ್ ಕದ್ರಿ (ಪದವು) ವಾರ್ಡ್ ನ ಸದಸ್ಯರಾಗಿದ್ದು, ಎಂ.ಶಶಿಧರ್ ಹೆಗ್ಡೆ ಕಾಂಗ್ರೆಸ್ ನ ದೇರೆಬೈಲ್ (ದಕ್ಷಿಣ) ವಾರ್ಡ್ ಸದಸ್ಯರು. ಪೂರ್ಣಿಮಾ ಸೆಂಟ್ರಲ್ ಮಾರ್ಕೆಟ್ ವಾರ್ಡ್ ಸದಸ್ಯೆಯಾಗಿದ್ದರೆ ಅವರ ಪ್ರತಿಸ್ಪರ್ಧಿ ಝೀನತ್ ಸಂಶುದ್ದೀನ್ ಬಂದರ್ ವಾರ್ಡ್ ಸದಸ್ಯೆ.
ಎಸ್ ಡಿಪಿಐನ ಇಬ್ಬರು ಸದಸ್ಯರು ಯಾರಿಗೂ ಮತ ಚಲಾಯಿಸದೆ ತಟಸ್ಥವಾಗುಳಿದರು. ಸ್ಥಾಯಿ ಸಮಿತಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್ ಹಾಗೂ ಉಪಮೇಯರ್ ಅವರ ಅಧಿಕಾರಾವಧಿ ಇಂದಿನಿಂದ ಒಂದು ವರ್ಷದ ವರೆಗೆ ಇರಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಸಿ.ಜಿ.ಪ್ರಕಾಶ್ ಚುನಾವಣೆ ಪ್ರಕ್ರಿಯೆ ನಡೆಸಿ ಕೊಟ್ಟರು. ಮನಪಾ ಆಯುಕ್ತ ಡಾ.ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.
Kshetra Samachara
09/09/2022 02:53 pm