ಕುಂದಾಪುರ: ಧರ್ಮದ ಆಧಾರದಲ್ಲಿ ವಿಭಜನೆಯಾದ ಮೇಲೆ ಭಾರತ ಧರ್ಮಾಧಾರಿತ ದೇಶವಾಗಿಯೇ ಉಳಿಯಬೇಕಿದ್ದರೆ ಅಖಂಡ ಭಾರತದ ಹಿಂದೂಗಳೆಲ್ಲಾ ಒಗ್ಗಟ್ಟಾಗಬೇಕಿದೆ ಎಂದು ಬಜರಂಗದಳದ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಹೇಳಿದ್ದಾರೆ.
ಕುಂದಾಪುರದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ಕುಂದಾಪುರ ನಗರ, ಬಿ.ಸಿ.ರೋಡ್ ಘಟಕ ಶುಕ್ರವಾರ ರಾತ್ರಿ ಹಮ್ಮಿಕೊಂಡ ಅಖಂಡ ಭಾರತ ಸಂಕಲ್ಪ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯವನ್ನು ಗಾಂಧಿ ಮತ್ತು ನೆಹರೂ ತಂದುಕೊಟ್ಟರು ಎಂದು ಪರೀಕ್ಷೆಯಲ್ಲಿ ಉತ್ತರ ಪಡೆದು ಅಂಕ ಪಡೆಯುವುದಕ್ಕಿಂತ ಆರು ಲಕ್ಷದ ಅರವತ್ತನಾಲ್ಕು ಸಾವಿರ ದೇಶಭಕ್ತರ ಹೆಸರು ಹೇಳುವ ಮೂಲಕ ದೇಶಭಕ್ತಿ ಪ್ರದರ್ಶಿಸಬೇಕಾಗಿದೆ ಎಂದರು. ಪಾಕಿಸ್ತಾನದಲ್ಲಿ ಇಂದಿಗೂ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಖಂಡ ಭಾರತದ ಹಿಂದೂಗಳು ಒಂದಾಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುರೇಂದ್ರ ಕೋಟೇಶ್ವರ, ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾದಾಗಲೇ ಈ ಸಮಸ್ಯೆಗೆ ಪರಿಹಾರ ಕಾಣಬೇಕಿತ್ತು. ಹಿಂದೂ ಸಮಾಜವನ್ನು ಬಡಿದೆಬ್ಬಿಸಲಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಿಹಿತಿಂಡಿಗೆ ಸೀಮಿತವಾಗಿದ್ದು, ಅದಕ್ಕಾಗಿ ಸಾವಿರಾರು ಜನ ಬಲಿದಾನ ಮಾಡಿರುವುದನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ಈ ಅಖಂಡ ಭಾರತ ಸಂಕಲ್ಪ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಎರಡು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಸಾವರ್ಕರ್ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ ಸುರೇಂದ್ರ, ಇಂದು ಜಿಹಾದಿಗಳ ರೂಪದಲ್ಲಿ ದೇಶವನ್ನು ವಿಭಜಿಸುವ ಉದ್ದೇಶದಿಂದ ನಡೆಯುತ್ತಿರುವ ದೌರ್ಜನ್ಯವನ್ನು ಮೆಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಕಾರ್ಯಕ್ರಮಕ್ಕೆ ಮುನ್ನ ಕೋಟೇಶ್ವರದಿಂದ ಕುಂದಾಪುರದ ವರೆಗೆ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಉಕರ್ತರು ಪಂಜಾಬಿನ ನ ಮೆರವಣಿಗೆ ನಡೆಸಿದರು.
ಗಣಪತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ವಿಶ್ವ ಹಿಂದೂ ಪರಿಷತ್ ಸಂಪರ್ಕ ಪ್ರಮುಖ, ಮುಖಂಡರಾದ ಗಿರೀಶ್ ಕುಂದಾಪುರ, ಬಜರಂಗದಳದ ಉಡುಪಿ ಜಿಲ್ಲಾ ಸಂಯೋಜಕ ಸುರೇಂದ್ರ ಕೋಟೇಶ್ವರ, ಜಿಲ್ಲಾ ಸಹ ಸಂಯೋಜಕ ಗುರುರಾಜ್ ಸಂಗಂ, ತಾಲೂಕು ಸಂಯೋಜಕ ಸುಧೀರ್ ಮೇರ್ಡಿ, ಕುಂದಾಪುರ ನಗರ ವಿ.ಹಿಂ.ಪ ನಗರ ಅಧ್ಯಕ್ಷ ನಿತಿನ್ ವಿಠಲವಾಡಿ, ನಗರ ಸಹ ಸಂಯೋಜಕ ನಿತಿನ್, ಬಿ.ಸಿ.ರೋಡ್ ಘಟಕ ಅಧ್ಯಕ್ಷ ಮಂಜುನಾಥ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದೀಪ್ ಮಾರ್ಕೋಡು ಸ್ವಾಗತಿಸಿದರು. ಸುರೇಂದ್ರ ಸಂಗಂ ನಿರೂಪಿಸಿದರು.
Kshetra Samachara
13/08/2022 07:38 am