ಉಡುಪಿ: ದೇಶದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನದ ಮೂಲಕ ಅಭಿನಂದಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾಹಿತಿ ಅರವಿಂದ ಚಿಪೂಣ್ಕರ್ ಸಾಹಿತ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಯಕ್ಷಗಾನ ಯುವ ಭಾಗವತರಾದ ಚಿಂತನಾ ಹೆಗಡೆ ರಾಗ ಸಂಯೋಜಿಸಿ ಬಡಗು ತಿಟ್ಟು ಯಕ್ಷಗಾನ ಶೈಲಿಯಲ್ಲಿ ಹಾಡಿದ್ದಾರೆ.
ಚಿಂತನಾ ಹೆಗಡೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಮಾಳ್ಕೊಡಿನ ಯಕ್ಷಗಾನ ಕಲಾವಿದ ಉದಯ ಹೆಗಡೆ ಅವರ ಎರಡನೆಯ ಪುತ್ರಿ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಚಿಂತನಾ ಹೆಗಡೆಗೆ ತಂದೆಯೇ ಯಕ್ಷಗುರು. ತಂದೆ ಬಯಲಾಟ ಮೇಳದಲ್ಲಿ ತಿರುಗಾಟ ಮಾಡುವ ಮೂಲಕ ಹೆಸರುವಾಸಿಯಾಗಿದ್ದು, ಮಗಳು ಚಿಂತನಾ, ಡೇರೆ ಮೇಳಗಳಲ್ಲಿ ಅತಿಥಿ ಕಲಾವಿದೆಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ.
ಸದ್ಯ ಈಕೆಯ ವೀಡಿಯೋ ವೈರಲ್ ಆಗಿದ್ದು, ಈಕೆಯ ಸುಶ್ರಾವ್ಯ ಯಕ್ಷಗಾನ ಭಾಗವತಿಕೆಗೆ ಯಕ್ಷಪ್ರೇಮಿಗಳು ಫಿದಾ ಆಗಿದ್ದಾರೆ.
PublicNext
25/07/2022 11:51 am