ಸುಳ್ಯ: ಸುಳ್ಯ ನಗರ ಪಂಚಾಯತ್ ಆಡಳಿತದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಭಿವೃದ್ಧಿಯಲ್ಲೂ ಹಿನ್ನಡೆ ಸಾಧಿಸಿದೆ. ಭ್ರಷ್ಟಾಚಾರದಿಂದ ಹೊರಬರಲು ಅವರಿಗೆ ಅಸಾಧ್ಯವಾಗಿದೆ. ಆದ್ದರಿಂದ ನ.ಪಂ.ನಲ್ಲಿ ವಿಪಕ್ಷ ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಪಲಾಯನ ಮಾಡಿದ್ದಾರೆ. ಆಡಳಿತ ಪಕ್ಷದ ಸದಸ್ಯರೇ ಸಭಾತ್ಯಾಗ ಮಾಡಿ, ಚರಿತ್ರೆ ಬರೆದಿದ್ದಾರೆ. ಅವರ ತಪ್ಪನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಯ ನಗರ ಕಾಂಗ್ರೆಸ್ ಹರಿಹಾಯ್ದಿದೆ.
ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಶಶಿಧರ್ ನೇತೃತ್ವದಲ್ಲಿ ನ.ಪಂ. ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಎಂ. ವೆಂಕಪ್ಪಗೌಡ, ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರ ಕ್ರಾಸ್ತಾ ಮತ್ತು ಶರೀಫ್ ಕಂಠಿ, ಭವಾನಿಶಂಕರ ಕಲ್ಮಡ್ಕ, ನಂದರಾಜ್ ಸಂಕೇಶ ಅವರು ಜು.14 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಈ ಬಗ್ಗೆ ಮಾತನಾಡಿದರು.
"ವಿರೋಧ ಪಕ್ಷದವರು ಆಡಳಿತಾತ್ಮಕವಾಗಿ ಎತ್ತಿದ ಪ್ರಶ್ನೆಗಳು ಸುಳ್ಳಾಗಿದ್ದರೆ ಅಥವಾ ನೈಜತೆಯಿಂದ ಕೂಡಿರದಿದ್ದರೆ ನಗರ ಪಂಚಾಯಿತಿ ಆಡಳಿತ ನಡೆಸುವವರು ನ.ಪಂ. ಸಭೆಯಲ್ಲಿ ಮಾಧ್ಯಮದವರ ಮುಂದೆ ಪೂರಕ ದಾಖಲೆಗಳನ್ನಿಟ್ಟು ಉತ್ತರಿಸಬೇಕಿತ್ತು. ಅದು ಬಿಟ್ಟು ನಂತರ ಪತ್ರಿಕಾಗೋಷ್ಠಿ ಮಾಡುತ್ತಾರೆಂದಾದರೆ, ಇವರಿಗೆ ವಿಪಕ್ಷದವರ ಪ್ರಶ್ನೆಗಳಿಗೆ ಉತ್ತರ ಕೊಡುವ ನೈತಿಕತೆಯಿಲ್ಲ ಎಂದರ್ಥವಲ್ಲವೇ?” ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರು.
Kshetra Samachara
14/07/2022 09:01 pm