ಪುತ್ತೂರು: ಸಾವಿರಾರು ವರ್ಷಗಳಿಂದ ಗುರುಪೂಜೆ ಸಂಸ್ಕೃತಿ ನಮ್ಮಲ್ಲಿ ನಡೆದುಕೊಂಡು ಬಂದಿದೆ. ಗುರುವಿಲ್ಲದ ವಿದ್ಯೆ ಇಲ್ಲ, ಹಾಗೆಯೇ ವಿದ್ಯೆಗೆ ಗುರು ಬೇಕು. ಹಿಂದೂ ರಾಷ್ಟ್ರ ಋಷಿ ಮುನಿಗಳ, ಹಿರಿಯರ ಕನಸು ಎಂದು ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಸನಾತನ ಸಂಸ್ಥೆ ವತಿಯಿಂದ ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಗುರು ಪೂರ್ಣಿಮಾ ಮಹೋತ್ಸವದಲ್ಲಿ ಉಪನ್ಯಾಸ ನೀಡಿದರು.
ಈ ಹಿಂದೆ ಸಂಸದ ಅನಂತ ಕುಮಾರ್ ಹೆಗಡೆಯಿಂದ ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನ ಬದಲಾವಣೆಯ ಪ್ರಸ್ತಾಪ ನಡೆಯಿತು. ಸಂವಿಧಾನ 105 ಬಾರಿ ತಿದ್ದುಪಡಿಯಾದಾಗ ಯಾರೂ ಮಾತನಾಡಿಲ್ಲ. ಈಗ 106 ಬಾರಿ ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದು ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಬಳಿಕ ‘ಧರ್ಮನಿಷ್ಠ ಸಮಾಜದ ನಿರ್ಮಾಣ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ’ ವಿಷಯ ಕುರಿತು ಹಿಂದೂ ಜನಜಾಗೃತಿ ಸಮಿತಿ ಸಂಯೋಜಕ ವಿವೇಕ್ ಪೈ ವಿಶೇಷ ಉಪನ್ಯಾಸ ನೀಡಿದರು.
ಮಹೋತ್ಸವದಲ್ಲಿ ಶ್ರೀ ವ್ಯಾಸ ಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ (ಗುರುಪೂಜೆ) ನಡೆಯಿತು. ‘ಸ್ವ ಸಂರಕ್ಷಣ ಪ್ರಾತ್ಯಕ್ಷಿಕೆ’ ವಿಶೇಷ ಆಕರ್ಷಣೆಯಾಗಿತ್ತು. ಗುರು ಆಠವಳೆಯವರ ಸಂದೇಶ, ವೀಡಿಯೊ ಪ್ರದರ್ಶಿಸಲಾಯಿತು. ಧರ್ಮ, ಆಧ್ಯಾತ್ಮ, ಸಾಧನೆ, ಬಾಲಸಂಸ್ಕಾರ, ಆಚಾರ ಧರ್ಮ, ಆಯುರ್ವೇದ, ಪ್ರಥಮ ಚಿಕಿತ್ಸೆ, ಸ್ವರಕ್ಷಣೆ, ಹಿಂದೂ ರಾಷ್ಟ್ರ ಇತ್ಯಾದಿ ವಿವಿಧ ವಿಷಯಗಳ ಗ್ರಂಥ ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಫಲಕ ಪ್ರದರ್ಶಿಸಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ಬಾಲಕೃಷ್ಣ, ಶ್ರೀಮತಿ ನವೀನ, ಹರಿಪ್ರಸಾದ್ ನೆಲ್ಲಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/07/2022 08:56 pm