ಉಳ್ಳಾಲ: ರಾಜ್ಯದಲ್ಲಿ ಬಿಜೆಪಿ 10 ವರ್ಷದಿಂದ ಇದೆ. ಕಳೆದ 60 ವರ್ಷದಿಂದಲೂ ಕಡಲೂ ಇತ್ತು... ಜೊತೆಗೆ ಕೊರೆತನೂ ಇತ್ತು. ಕಾಂಗ್ರೆಸ್ಸೂ ಇತ್ತು, ಹಾಗಿದ್ರೂ ಕಡಲ್ಕೊರೆತಕ್ಕೆ ಪರಿಹಾರ ಏನ್ ಕೊಟ್ರಿ? ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್ ಗೆ ಪ್ರಶ್ನೆ ಮಾಡಿದರು.
ಅವರಿಂದು ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲದ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿದರು. ಉಳ್ಳಾಲ ಶಾಸಕ ಯು.ಟಿ.ಖಾದರ್ ಚುನಾವಣೆ ದೃಷ್ಟಿಯಲ್ಲಿಟ್ಟು ಸುಮ್ನೆ ಆಪಾದನೆ ಮಾಡೋದನ್ನ ಬಿಡಲಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಪ್ರದೇಶಗಳಿಗೆ ಏನು ಮಾಡಿದ್ದಾರೆ?
ಸರಕಾರದ ವಿರುದ್ಧ ಟೀಕೆ- ಟಿಪ್ಪಣಿ ಸಹಜ. ನಾವು ರಾಜಕೀಯ ಮಾಡಲ್ಲ. ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಸಂತ್ರಸ್ತರಿಗೆ ಶೀಘ್ರ ಪರಿಹಾರನೂ ಒದಗಿಸುತ್ತೇವೆ. ತಜ್ಞರನ್ನೊಳಗೊಂಡ ತಂಡದಿಂದ ಪ್ರದೇಶ ಸಮೀಕ್ಷೆ ನಡೆಸಿ, ಸಿಎಂ ಜತೆ ಮಾತನಾಡಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.
ಈ ಬಾರಿ 7 ಜಿಲ್ಲೆಗಳಲ್ಲಿ ಬಹಳಷ್ಟು ಮಳೆ ಆಗಿದ್ದು, ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇನೆ. ಮನೆ ಕಳಕೊಂಡವರಿಗೆ NDRF ನಿಯಮ ಪ್ರಕಾರ ಈ ಹಿಂದೆ 95,000 ರೂ. ಪರಿಹಾರ ಇದ್ದು, ಸಿಎಂ ಜತೆ ಮಾತನಾಡಿ, ಅದನ್ನು 5 ಲಕ್ಷಕ್ಕೆ ಏರಿಸಿದ್ದು ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಲು ಆದೇಶಿಸಿರುವುದಾಗಿ ತಿಳಿಸಿದರು. ಸಚಿವರಾದ ಸುನಿಲ್ ಕುಮಾರ್, ಎಸ್.ಅಂಗಾರ ಜೊತೆಯಲ್ಲಿದ್ದರು.
Kshetra Samachara
07/07/2022 10:20 pm