ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತೆಗ್ಗರ್ಸೆ ಗ್ರಾಮದ ಸರ್ವೆ ನಂ. 170ರಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ (ಎಸ್ಎಲ್ಆರ್ ಎಂ ) ನಿರ್ಮಿಸಬಾರದು ಎಂದು ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದರು. ಉದ್ದೇಶಿತ ಪ್ರದೇಶಕ್ಕೆ ಕಾಮಗಾರಿಗಾಗಿ ಬಂದ ಜೆಸಿಬಿ ತಡೆದು ನಿಲ್ಲಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಹಲವು ಮನೆ, ಶಾಲೆ, ಧಾರ್ಮಿಕ ಕೇಂದ್ರ, ಹೊಳೆ, ಅರಣ್ಯ ಪ್ರದೇಶವಿದ್ದು ಘಟಕ ನಿರ್ಮಿಸುವುದು ಸೂಕ್ತವಲ್ಲ. ಸರ್ವೆ ನಂ. 170 ರಲ್ಲಿ 8.60 ಎಕ್ರೆ ಸ್ಥಳದ 100 ಮೀ. ಸುತ್ತಳತೆಯಲ್ಲಿ ಮನೆಗಳಿದ್ದು, ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಹೊಳೆ ನೀರು ಕಲುಷಿತಗೊಳ್ಳಲಿದೆ, ಅರಣ್ಯ ನಾಶವೂ ಆಗುತ್ತದೆ. ಸುತ್ತಲೂ ಕೃಷಿ ಭೂಮಿಯಿದ್ದು, ಬೆಳೆ ಹಾನಿಯಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಘಟಕ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ. ಘಟಕ ಕೈ ಬಿಡಬೇಕೆಂದು ಶಾಸಕರ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಗುವುದು ಎಂದರು.
ಈ ಸಂದರ್ಭ ಪಟ್ಟಣ ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಮಾತನಾಡಿ, ಅಮೃತನಗರ ಯೋಜನೆ ಅಡಿಯಲ್ಲಿ 8.6 ಎಕ್ರೆ ಜಾಗವನ್ನು ಒಂದು ಕೋಟಿ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸುತ್ತ ಕಾಂಪೌಂಡ್, ರಸ್ತೆ ನಿರ್ಮಾಣ ಮತ್ತಿತರ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯಲ್ಲಿ ಹಣ ಕಾಯ್ದಿರಿಸಲಾಗಿದೆ. ದಿನಕ್ಕೆ 10 ಟನ್ ಘನ ತ್ಯಾಜ್ಯ ಉತ್ಪಾದನೆ ಆಗುತ್ತಿದ್ದು, ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಮಾಡಬೇಕಾಗಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದರು.
ತೆಗ್ಗರ್ಸೆ ಗ್ರಾಪಂ ಮಾಜಿ ಸದಸ್ಯ ಗೋಪಾಲ ಪೂಜಾರಿ, ಸ್ಥಳೀಯರಾದ ಅಕ್ಷಯ್, ಗುಲಾಬಿ, ಊರಿನ ಮುಖಂಡರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
Kshetra Samachara
02/07/2022 09:10 pm