ಮಣಿಪಾಲ: ರಾಜ್ಯದಲ್ಲಿ ಕನ್ನಡದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಸಮಗ್ರ ಕನ್ನಡ ಭಾಷಾ ನೀತಿ ವಿಧೇಯಕ"ವೊಂದನ್ನು ಸಿದ್ಧಪಡಿಸುತ್ತಿದ್ದು, ಇದನ್ನು ಸರಕಾರಕ್ಕೆ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್ ನಾಗಾಭರಣ ಹೇಳಿದ್ದಾರೆ.
ಮಣಿಪಾಲದಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾತನಾಡುತ್ತಿದ್ದರು.
ಈ ವಿಧೇಯಕವನ್ನು ಸರಕಾರ ಒಪ್ಪಿಕೊಂಡರೆ, ರಾಜ್ಯದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಸಿಗಲಿದೆ. ಸಮಗ್ರ ಕನ್ನಡ ಭಾಷಾ ನೀತಿ, ಉದ್ಯೋಗ, ಶಿಕ್ಷಣ ಹಾಗೂ ಆಡಳಿತದಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಲಿದೆ ಎಂದು ತಿಳಿಸಿದ ನಾಗಾಭರಣ, ವಿಧೇಯಕದ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು. ಅದೀಗ ಸಿದ್ಧತಾ ಹಂತದಲ್ಲಿದ್ದು ಈಗಲೇ ಎಲ್ಲಾ ವಿಷಯ ಬಹಿರಂಗಪಡಿಸಲಾಗದು ಎಂದರು.
ರಾಜ್ಯದಲ್ಲಿ ಕನ್ನಡ ಬಳಕೆ ಹಾಗೂ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸಗಿದ, ನಿರ್ಲಕ್ಷ್ಯ ತೋರಿದ ರಾಜ್ಯದ ಒಟ್ಟು 105 ಮಂದಿ ಐಎಎಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಪ್ರಾಧಿಕಾರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಅವರು ಹೇಳಿದರು.
ಕೂಸು ಬಡವಾಗದಿರಲಿ;
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಗುತ್ತಿರುವ ವಿವಾದಕ್ಜೆ ಉತ್ತರಿಸಿದ ಅವರು, ಪ್ರಸ್ತುತ ನಡೆಯುತ್ತಿರುವ ಕನ್ನಡ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಲ್ಲಿ ನಾವು ನಮ್ಮ ನಿಲುವನ್ನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸ್ಪಷ್ಟಪಡಿಸಿದ್ದೇವೆ. ಅಪ್ಪ- ಅಮ್ಮನ ಜಗಳದಲ್ಲಿ ಮಕ್ಕಳು ಬಡವಾಗಬಾರದು ಎಂಬುದು ನಮ್ಮ ನಿಲುವಾಗಿದೆ ಎಂದು ನಾಗಾಭರಣ ಹೇಳಿದರು.
PublicNext
15/06/2022 12:13 pm