ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷಗಳ ಪೂರ್ತಿ ಆಡಳಿತ ಸಂಭ್ರಮದ ವಿಕಾಸ್ ತೀರ್ಥ ಬೈಕ್ ರ‌್ಯಾಲಿಯಲ್ಲಿ ಹೆಲ್ಮೆಟ್ ರಹಿತವಾಗಿ ಪ್ರಯಾಣ ಮಾಡಿರುವ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಇಂದು ಮಂಗಳೂರಿನ ಕಾವೂರು ಬಿಜೆಪಿ ಕಚೇರಿಯಿಂದ ಬಂಟ್ವಾಳಕ್ಕೆ ಆಯೋಜಿಸಲಾಗಿದ್ದ ವಿಕಾಸ್ ತೀರ್ಥ ಬೈಕ್ ಜಾಥಾಕ್ಕೆ ಶಾಸಕ ಡಾ.ವೈ.ಭರತ್ ಶೆಟ್ಟಿ ಚಾಲನೆ ನೀಡಿದ್ದರು. ಅಲ್ಲದೆ, ರ‌್ಯಾಲಿಯಲ್ಲಿ ಸ್ವತಃ ಡಾ.ವೈ.ಭರತ್ ಶೆಟ್ಟಿಯವರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಾರೆ.
ಅಲ್ಲದೆ, ನೂರಕ್ಕೂ ಅಧಿಕ ಮಂದಿ ಹೆಲ್ಮೆಟ್ ಧರಿಸದೆ ನಡೆಸಿದ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಲು ನೇತೃತ್ವವನ್ನೂ ನೀಡಿದ್ದಾರೆ. ಇದೆಲ್ಲವೂ ನಡೆದಿರುವುದು ಪೊಲೀಸ್ ಬಂದೋಬಸ್ತ್ ಇದ್ದ ಕಾರ್ಯಕ್ರಮದಲ್ಲಿ ಎಂದು ಮುನೀರ್ ಕಾಟಿಪಳ್ಳ ದೂರಿದ್ದಾರೆ.
ಸಣ್ಣಪುಟ್ಟ ಚಾಲನಾ ನಿಯಮ ಉಲ್ಲಂಘನೆಗಳನ್ನು ಪೋಟೊ ಹೊಡೆದು ಗರಿಷ್ಠ ದಂಡ ವಿಧಿಸುವ, ವಾಟ್ಸ್ಆ್ಯಪ್ ವೈರಲ್ ವೀಡಿಯೋಗಳ ಆಧಾರದಲ್ಲಿ ವಾಹನ ಸವಾರರಿಗೆ ಮಂಗಳೂರು ಪೊಲೀಸರು ದಂಡ ವಿಧಿಸುತ್ತಾರೆ.
ಆದರೆ, ಶಾಸಕರ ನೇತೃತ್ವದಲ್ಲಿ ನಡೆದಿರುವ ಈ ಸಾಮೂಹಿಕ ಕಾನೂನು ಉಲ್ಲಂಘನೆ ಪ್ರಕರಣದ ಕುರಿತು ಪೊಲೀಸರು ಮೌನ ವಹಿಸಿರುವುದು ಖಂಡನೀಯ. ತಕ್ಷಣ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಧ್ಯ ಪ್ರವೇಶಿಸಿ, ಶಾಸಕ ಡಾ.ವೈ.ಭರತ್ ಶೆಟ್ಟಿ ಸಹಿತ ಬೈಕ್ ರ‌್ಯಾಲಿ ಆಯೋಜಕರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
Kshetra Samachara
12/06/2022 09:31 pm