ಮಂಗಳೂರು: ಭಾರತದಲ್ಲಿ ನಮಗೆ ಮಾರ್ಕ್ ಹಾಗೂ ಮಾರ್ಕ್ಸ್ ಎಂಬ ಶಿಕ್ಷಣ ದೊರಕುತ್ತಿದೆ. ಒಂದು ಪರೀಕ್ಷೆಯಲ್ಲಿ ಗಳಿಸಿರುವ ಅಂಕ ಮತ್ತೊಂದು ಮಾರ್ಕ್ಸ್‌ವಾದಿ ಶಿಕ್ಷಣ. ಈ ರೀತಿಯ ಶಿಕ್ಷಣ ದೊರೆಯಲು ಕಾಂಗ್ರೆಸ್ - ಕಮ್ಯೂನಿಸ್ಟ್ - ಕನ್ ವರ್ಷನ್ ಮಾಫಿಯಾ ಎಂಬ ಸಿ ಕ್ಯೂಬ್ ಕಾರಣ. ಈ ಮೂರು ಸೇರಿ ಭಾರತದ ಪೂರ್ವಜರ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಶಿಕ್ಷಣದಲ್ಲಿ ಸೇರ್ಪಡೆಗೊಳಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸಿಟಿಜನ್ಸ್ ಕೌನ್ಸಿಲ್ ವತಿಯಿಂದ ನಗರದ ಸಂಘನಿಕೇತನದಲ್ಲಿ ನಡೆದ 'ಪಠ್ಯ ರಾಜಕಾರಣ ಸತ್ಯ-ಮಿಥ್ಯ' ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ಪಠ್ಯ ರಾಜಕಾರಣ ಭಾರತೀಕರಣ V/S ತುಕುಡೆ ಗ್ಯಾಂಗ್ ನಡುವಿನ ಹೋರಾಟವಷ್ಟೇ. ಇದು ರಾಷ್ಟ್ರೀಯ ವಾದವನ್ನು ಯಾವ ರೀತಿ ದುರ್ಬಲಗೊಳಿಸಬಹುದು ಎಂಬ ಸಂಚಿನ ಭಾಗ. ಈ ತುಕುಡೆ ಗ್ಯಾಂಗ್ ನವರು ಪೊಳ್ಳು ವಿತಂಡವಾದ ಇಟ್ಟುಕೊಂಡು ಪರಾವಲಂಬಿ ಜೀವಿಗಳಾಗಿ ಬದುಕಿಕೊಂಡಿದ್ದರು. ಇದೀಗ ಅದಕ್ಕೂ ಕತ್ತರಿ ಬಿತ್ತು ಎನ್ನುವ ಕಾರಣಕ್ಕೆ ಈ ವಿವಾದ ಎಬ್ಬಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಶಿಕ್ಷಣದಲ್ಲಿ ತಪ್ಪಿರುವುದನ್ನು ಸರಿಪಡಿಸಿದರೆ ಕೇಸರಿಕರಣ ಎನ್ನುತ್ತಾರೆ. ನಮ್ಮ ದೇಶದಲ್ಲಿ ಅದೆಷ್ಟೋ ವೀರರಿದ್ದಾರೆ. ಅವರ ಬಗ್ಗೆ ನಮ್ಮವರಿಗೆ ತಿಳಿಸುವ ಬದಲು ದೇಶದ ಮೇಲೆ ಆಕ್ರಮಣ ಮಾಡಿದವರನ್ನು ಗ್ರೇಟ್ ಎಂದು ಹೇಳಲಾಗುತ್ತಿದೆ. ಅದನ್ನೆಲ್ಲ ಸರಿಪಡಿಸಲು ಹೋದ ನಾವುಗಳು ಕೋಮುವಾದಿಗಳು, ಕೇಸರಿಕರಣವಾಗುತ್ತದೆ. ಪಠ್ಯದಲ್ಲಿ ದೇಶದ ಮೇಲೆ ದಾಳಿ ನಡೆಸಿದವರ ವಿಚಾರವಿದೆ.
ಆದರೆ, ರಾಮಾಯಣ - ಮಹಾಭಾರತ ಬಗ್ಗೆ ವಿಚಾರವಿಲ್ಲ. ನಾವು ಭಾರತೀಯತೆ ಬಗ್ಗೆ ಹೇಳಲಿದ್ದೇವೆ. ಭಾರತೀಯತೆ ಎದ್ದು ನಿಂತರೆ ಭಾರತ ಜಗತ್ತಿನ ಗುರು ಆಗುತ್ತದೆ. ಅದಕ್ಕೆ ಇವರು ಈ ರೀತಿ ಬೊಬ್ಬೆ ಹಾಕುತ್ತಾರೆ ಎಂದರು.
ಇಸ್ಲಾಂ, ಕ್ರೈಸ್ತರು ಕಾಲಿಟ್ಟಲ್ಲಿ ಸಂಘರ್ಷವಾಗಿದೆ. ಇಸ್ಲಾಂ ಹೆಸರಲ್ಲಿ ಭಯೋತ್ಪಾದನೆ ಆಗ್ತಿದೆ. ಜಗತ್ತಿನ ಎಲ್ಲಾ ಧರ್ಮಗಳು ಶಾಂತಿ ಸಾರುತ್ತದೆ ಎಂಬುದು ಒಂದು ಸುಳ್ಳು. ಹಾಗೆ ಶಾಂತಿ ಸಾರಿದರೂ ಬಾಂಬ್ ದಾಳಿ ಯಾಕೆ ಮಾಡ್ತಾರೆ. ಒಬ್ಬನೇ ದೇವರು ಒಬ್ಬನೇ ಪ್ರವಾದಿ ಎನ್ನುವವರು ಯಾಕೆ ಒಬ್ಬರ ಮೇಲೆ ಒಬ್ಬರು ಬಾಂಬ್ ಹಾಕ್ತಿದ್ದಾರೆ. ಇವರು ನಿಜವಾದ ಭಯೋತ್ಪಾದಕರು.
ನಾವು ಪಠ್ಯದಲ್ಲಿ ಅಲ್ಪ ಪ್ರಮಾಣದ ಪರಿಷ್ಕರಣೆ ಮಾಡಿದ್ದೇವೆ. ಅಷ್ಟರಲ್ಲೇ ಇವರಿಗೆ ಉರಿ ಶುರು ಆಗಿದೆ, ಅಂದರೆ ಇನ್ನೂ ಪೂರ್ತಿ ಪರಿಷ್ಕರಣೆ ಮಾಡಿದರೆ ಏನಾಗಬಹುದು ಎಂದು ಸಿ.ಟಿ.ರವಿ ಪ್ರಶ್ನಿಸಿದರು.
PublicNext
11/06/2022 08:31 pm