ಉಳ್ಳಾಲ: ಹರೇಕಳ-ಅಡ್ಯಾರ್ ಸೇತುವೆ ಮತ್ತು ಅಣೆಕಟ್ಟು ಕಾಮಗಾರಿ ಸಂಪೂರ್ಣಗೊಳ್ಳುತ್ತಾ ಬಂದಿದ್ದು ಈ ನಡುವೆ ಡ್ಯಾಂನಿಂದ ಉಳಿಯ ಸಹಿತ ಸ್ಥಳೀಯ ನದಿತಟದಲ್ಲಿರುವ ಮನೆಗಳು ಮುಳುಗುವ ಆತಂಕ ಎದುರಾಗಿದೆ.ವಿಧಾನಸಭಾ ವಿಪಕ್ಷ ಉಪನಾಯಕ ಶಾಸಕ ಖಾದರ್ ಅವರು ನಿನ್ನೆ ಪಾವೂರು ಗಾಡಿಗದ್ದೆಯಿಂದ ಹರೇಕಳತನಕ ಬೋಟಿನಲ್ಲೇ ತೆರಳಿ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಸಭೆ ನಡೆಸಿದರು.
ಪಾವೂರು ಮತ್ತು ಹರೇಕಳ ಗ್ರಾಮ ಅಭಿವೃದ್ಧಿ ಹಾಗೂ ಇತರ ವಿಚಾರಗಳ ಕುರಿತಂತೆ ಅವರು ದೋಣಿಯಲ್ಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಹರೇಕಳ ಸೇತುವೆ ಯೋಜನೆಯಿಂದ ಕರ್ನಾಟಕ ಕೇರಳ ಹೆದ್ದಾರಿ ಸಂಪರ್ಕ, ಕ್ಷೇತ್ರದ ಗ್ರಾಮಗಳ ಸಂಪರ್ಕ, ಅಂತರ್ಜಲ ಅಭಿವೃದ್ಧಿ, ಮೀನುಗಾರಿಕೆ, ಪ್ರವಾಸೋದ್ಯಮದಂಥ ಭವಿಷ್ಯದ ಅಭಿವೃದ್ಧಿಯ ಯೋಜನೆ ಇದಾಗಿದೆ ಎಂದರು.
ಅಭಿವೃದ್ಧಿ ಆಗುವಾಗ ಕೆಲವೊಂದು ಸಮಸ್ಯೆ ಸ್ವಾಭಾವಿಕವಾದರೂ ಮುಂಜಾಗ್ರತೆ ವಹಿಸಲಾಗಿದೆ. ಸೇತುವೆ ವಿಚಾರದಲ್ಲಿ ಸ್ಥಳೀಯರ ಭಯ ನಿವಾರಿಸಲು ಸಭೆ ನಡೆಸಲಾಗಿದೆ. ಸ್ಥಳೀಯರಿಗೆ ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ಅನುದಾನ ಬಿಡುಗಡೆ ಬಗ್ಗೆ ನೀರಾವರಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ. ಒಂದು ಕಿ.ಮೀ. ನದಿಬದಿ ರಸ್ತೆ ನಿರ್ಮಾಣಕ್ಕೆ ಹತ್ತು ಕೋಟಿ ಯೋಜನೆ ರೂಪಿಸಲಾಗಿದ್ದು ಸರ್ವೇ ಆಗಿದೆ ಎಂದರು.
ಪಾವೂರು ಉಳಿಯಕ್ಕೆ ಶಾಶ್ವತ ತೂಗು ಸೇತುವೆ ಅಸಾಧ್ಯ.ಉಳಿಯ ದ್ವೀಪವಾಗಿದ್ದು ಇಲ್ಲಿನ ಜನರ ಸಂಪರ್ಕ ಅಡ್ಯಾರ್ ಮತ್ತು ಪಾವೂರು ಗಾಡಿಗದ್ದೆ ಮೂಲಕ ಆಗಿತ್ತು.ಉಳಿಯಕ್ಕೆ ಟೂರಿಸಂ ಮೂಲಕ ಸೇತುವೆ, ಸಜಿಪದಿಂದ ತುಂಬೆಗೆ ಸೇತುವೆ ನಿರ್ಮಾಣ ಕನಸು ಇದ್ದು,ಯಾವುದಾದರೂ ಮೂಲದಿಂದ ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು.
Kshetra Samachara
06/06/2022 10:09 am