ಬೈಂದೂರು: ಬೆಂಗಳೂರಿನ ಗಾಂಧಿ ಭವನದಲ್ಲಿ ರೈತ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಮಸಿ ಎಸೆದು, ಹಲ್ಲೆ ಮಾಡಿದ್ದು ಖಂಡನೀಯ. ಈ ಕೃತ್ಯವನ್ನು ಖಂಡಿಸಿ ಕುಂದಾಪುರದಲ್ಲಿ ಸಂಯುಕ್ತ ಹೋರಾಟ ಸಮಿತಿ ನೇತ್ರತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಸಮಿತಿ ಮುಖಂಡರಾದ ಎಚ್.ನರಸಿಂಹ ಮಾತನಾಡಿ, ಬಿಜೆಪಿ ತನ್ನ ವೈಪಲ್ಯ ದಿಕ್ಕು ತಪ್ಪಿಸಲು ಅಲ್ಪಸಂಖ್ಯಾತ ಮುಸ್ಲಿಮರ ಅವ್ಯಾಹತವಾಗಿ ಸರಣಿ ದಾಳಿ, ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ, ಶಾಲಾ ಪಠ್ಯ ಪುಸ್ತಕಗಳಲ್ಲಿ ಸಂಘಪರಿವಾರ ನಾಯಕರ ಸೇರ್ಪಡೆ ವಿವಾದಗಳ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಸರಕಾರ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಸರ್ಕಾರ ತನ್ನ ಗೂಂಡಾ ಕಾರ್ಯಕರ್ತರನ್ನು ಬಳಸಿ ಸರಕಾರ ರಕ್ಷಿಸಿಕೊಳ್ಳಲು ಇಂತಹ ಕೃತ್ಯಗಳನ್ನು ನಡೆಸುತ್ತಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಬಿಜೆಪಿ ಸರ್ಕಾರವು ಈ ಹಿಂದೆ ರೈತರ ಹೋರಾಟಕ್ಕೆ ಮಣಿದು ರೈತರಿಗೆ ಕಾನೂನಿನಲ್ಲಿ ಬೆಂಬಲ ಬೆಲೆ ನೀಡಲು ಒಪ್ಪಿಕೊಂಡು ವಿಶ್ವಾಸ ದ್ರೋಹ ಬಗೆಯಿತು. ಮತ್ತೆ ಹೋರಾಟ ಹತ್ತಿಕ್ಕಲು ಗೂಂಡಾಗಳನ್ನು ಬಳಸಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರವಿದ್ದರೂ ನ್ಯಾಯಾಂಗ, ಹಾಗೂ ಪೊಲೀಸ್ ವ್ಯವಸ್ಥೆ ದುರ್ಬಲಗೊಳಿಸಿ ಕಾನೂನು ಕೈಗೆತ್ತಿಕೊಳ್ಳುವುದು ಅನಾಗರಿಕ ವರ್ತನೆಯಾಗಿದೆ.
ಈ ಹೊಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡ ರಾಜೇಶ್ ವಡೇರಹೋಬಳಿ, ಸಿಐಟಿಯು ಹಿರಿಯ ಮುಖಂಡರಾದ ವಿ.ನರಸಿಂಹ, ಚಂದ್ರಶೇಖರ ವಿ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
31/05/2022 10:54 pm