ಉಡುಪಿ: ರಾಜ್ಯದ ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕರಾವಳಿ ಭಾಗದ ಮೀನುಗಾರ ಸಮುದಾಯದವರು ಪ.ಜಾತಿಯ ಮೊಗೇರ ಜನಾಂಗದ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸುತ್ತಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಪರಿಶಿಷ್ಟ ಜಾತಿಯ 101 ಜಾತಿ ಪಟ್ಟಿಯಲ್ಲಿ ಮೊಗೇರ ಎಂಬ ಹೆಸರೇ ಇಲ್ಲ. ಹಾಗಿದ್ದರೂ ಅಧಿಕಾರಿಗಳು ಸುಳ್ಳು ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಅದೇ ರೀತಿ, ಅಸ್ಪೃಶ್ಯ ಜಾತಿಯಲ್ಲದ ಮೀನುಗಾರರು ಹಾಗೂ ಬೋವಿ ಜನಾಂಗದವರೂ ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸೌಲಭ್ಯಗಳನ್ನು ಪಡೆದಿರುವ ಬಗ್ಗೆ ಈಗಾಗಲೇ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದ್ದರೂ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವುದು ಖಂಡನೀಯ.
ಈ ಮೂರು ಜಿಲ್ಲೆಯಲ್ಲಿರುವ ಕರಾವಳಿ ಭಾಗದ ಮೀನುಗಾರರು ಈಗಾಗಲೇ ಪ್ರವರ್ಗ-1ರಲ್ಲಿ ಅತಿ ಹೆಚ್ಚಿನ ಸರಕಾರಿ ಸೌಲಭ್ಯ ಪಡೆದು ಉದ್ಯಮ, ಶೈಕ್ಷಣಿಕ, ಬ್ಯಾಂಕ್, ಸಹಕಾರಿ ಸಂಘಗಳನ್ನು ಸ್ಥಾಪಿಸಿ ಬಲಾಢ್ಯ ಸಮುದಾಯದವರಾಗಿದ್ದಾರೆ. ಸಂವಿಧಾನದಲ್ಲಿರುವಂತೆ ಮೀಸಲಾತಿ ಅಸ್ಪೃಶ್ಯ ಜನಾಂಗಕ್ಕೆ ಪ್ರಾತಿನಿಧ್ಯ ಒದಗಿಸಲು ನೀಡಿರುವ ಸೌಲಭ್ಯವಾಗಿದೆ. 'ಅಸ್ಪೃಶ್ಯರಲ್ಲದ ಜನಾಂಗಕ್ಕೆ ಪ. ಜಾತಿಯ ಮೀಸಲಾತಿ ನೀಡಿದ್ದಲ್ಲಿ ಈ ವರ್ಗಕ್ಕೆ ತೀವ್ರ ಅನ್ಯಾಯವಾಗುತ್ತದೆ.
ಆದ್ದರಿಂದ ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದು, ಮೀನುಗಾರ ಮತ್ತು ಬೋವಿ ಜನಾಂಗದವರಿಗೆ ನೀಡಿರುವ ಸರ್ಕಾರಿ ಸೌಲಭ್ಯಗಳನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಹಾಗೂ ಅಸ್ಪಶ್ಯರಲ್ಲದ ಮೀನುಗಾರ ಸಮುದಾಯಕ್ಕೆ ನೀಡಿರುವ ಪ. ಜಾತಿಯ ಮೊಗೇರ ಪ್ರಮಾಣಪತ್ರಗಳನ್ನು ಕೂಡಲೇ ತಡೆಹಿಡಿಯಬೇಕು. ಜೂನ್ 6ರಂದು ಉಡುಪಿಯಲ್ಲಿ ದಲಿತ ಸಂಘರ್ಷ ಸಮಿತಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಮುಖಂಡ ಸುಂದರ ಮಾಸ್ತರ್ ಹೇಳಿದ್ದಾರೆ.
Kshetra Samachara
28/05/2022 04:33 pm