ಮೂಡುಬಿದಿರೆ: ರಾಜ್ಯದ ಪಠ್ಯಪುಸ್ತಕಗಳಲ್ಲಿ ಭಗತ್ಸಿಂಗ್, ನಾರಾಯಣ ಗುರುಗಳು, ಪಿ.ಲಂಕೇಶ್ ಸಾ.ರಾ ಅಬೂಬಕ್ಕರ್ ಸಹಿತ ಅಪ್ರತಿಮ ವ್ಯಕ್ತಿತ್ವದವರ ಪಠ್ಯ ಕೈಬಿಟ್ಟಿರುವುದು ತಪ್ಪು ಎಂದು ಕೆಪಿಸಿಸಿ ಸಂಯೋಜಕ, ವಕೀಲ ಪದ್ಮಪ್ರಸಾದ್ ಜೈನ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಶಿಕ್ಷಣ ತಜ್ಞರು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ಕೈಬಿಟ್ಟಿರುವ ವ್ಯಕ್ತಿಗಳ ಪಠ್ಯವನ್ನು ಸೇರಿಸಬೇಕು. ರೋಹಿತ್ ಚಕ್ರತೀರ್ಥ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಲ್ಲ. ಅವರ ಬದಲು ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು, ಉತ್ತಮ ಶಿಕ್ಷಕರನ್ನು ಈ ಹುದ್ದೆಗೆ, ಸಮಿತಿಗೆ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಇಂತಹ ಪ್ರಮಾದಗಳು ನಡೆಯುತ್ತಿರುತ್ತವೆ ಎಂದರು.
15 ದಿನಗಳ ಮುಂಚೆ ಶಾಲಾಗಳು ಪುನರ್ ಆರಂಭಗೊಳ್ಳುತ್ತದೆ ಎಂದು ಶಿಕ್ಷಣ ಇಲಾಖೆ ಘೋಷಣೆ ಮಾಡಿದರೆ ಸಾಕಾಗುವುದಿಲ್ಲ ಮಕ್ಕಳಿಗೆ ಶಾಲೆ ಪ್ರಾರಂಭವಾಗುವ ವೇಳೆ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದರು.
ಮೂಡುಬಿದಿರೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಪಿಯು ಕಾಲೇಜನ್ನು ನಗರದ ಕೇಂದ್ರ ಪ್ರದೇಶದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ನಂತರ ಪ್ರಿಯಾಂಕ ಗಾಂಧಿಗೆ ರಾಜ್ಯಸಭೆ ಟಿಕೆಟ್ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಪದ್ಮಪ್ರಸಾದ್ ಕಾಂಗ್ರೆಸ್ನ ಬಲವರ್ಧನೆಗೆ ರಾಜ್ಯದಿಂದ ಪ್ರಿಯಾಂಕಗಾಂಧಿಗೆ ರಾಜ್ಯಸಭೆ ಟಿಕೆಟ್ ಕೊಡುವ ನಿರ್ಧಾರ ಒಳ್ಳೆಯದೇ, ಒಂದು ವೇಳೆ ಅವರು ಒಪ್ಪದಿದ್ದರೆ ಹಿಂದುಳಿದ ವರ್ಗದ ನಾಯಕರಿಗೆ ಟಿಕೆಟ್ ನೀಡುವಂತಾಗಬೇಕು. ವಿಧಾನಪರಿಷತ್ ವಿಪಕ್ಷ ನಾಯಕನನ್ನಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿರುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
Kshetra Samachara
18/05/2022 09:03 pm