ಉಡುಪಿ: ಉಡುಪಿಯಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಮೇ 10ರಂದು ನಡೆಯಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷನಳಿನ್ ಕುಮಾರ್ ಕಟೀಲು, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಸಹಿತ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಕಿದಿಯೂರು ಹೊಟೇಲ್ನ ಮಾಧವ ಕೃಷ್ಣ ಸಭಾಭವನದಲ್ಲಿ ಸಭೆ ಉದ್ಘಾಟನೆಯಾಗಲಿದೆ. ಅದಕ್ಕೂ ಮೊದಲು ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಬರಲಿದ್ದಾರೆ. ರಾಜ್ಯ ಮಟ್ಟದ ವಿವಿಧ ಜವಾಬ್ದಾರಿಯನ್ನು ಹೊತ್ತಿರುವ ಬಿ.ವೈ. ವಿಜಯೇಂದ್ರ, ತೇಜಸ್ವಿನಿ ಅನಂತ ಕುಮಾರ್, ಪ್ರತಾಪ ಸಿಂಹ, ಎನ್. ರವಿಕುಮಾ ನಾರಾಯಣ, ಮಾಲಿಕಯ್ಯ ಗುತ್ತೇದಾರ್ ಸಹಿತ 77 ಮಂದಿ ಆಹ್ವಾನಿತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಭೆಯ ನಿಮಿತ್ತ ನಗರದ ಮುಖ್ಯ ರಸ್ತೆಗಳಲ್ಲಿ ಬಿಜೆಪಿ ಧ್ವಜ ಹಾರಿಸಿ, ಬಂಟಿಂಗ್ಸ್ನಿಂದ ಸಿಂಗಾರ ಮಾಡಲಾಗಿದೆ. ಶುಭಕೋರುವ ಪ್ಲೆಕ್ಸ್ಗಳನ್ನು ಅಳವಡಿಸಲಾಗಿದೆ. ಪದಾಧಿಕಾರಿಗಳ ಸಭೆಯ ಆರಂಭಕ್ಕೂ ಮುನ್ನ ಬೆಳಗ್ಗೆ 9ಕ್ಕೆ ರಾಜ್ಯಾಧ್ಯಕ್ಷರಿಂದ ಉಡುಪಿ ನಗರ ಬಿಜೆಪಿ ಮಣಿಪಾಲದ ನೆಹರೂ ನಗರದ ಕೊರಗ ಕಾಲನಿಯಲ್ಲಿ ನಿರ್ಮಿಸಿದ ಮನೆಯ ಹಸ್ತಾಂತರ ಮಾಡಲಿದ್ದಾರೆ.
Kshetra Samachara
10/05/2022 07:59 am