ಮಂಗಳೂರು: ಮಂಗಳೂರು ನಗರದಲ್ಲಿರೋ ಲೇಡಿಗೋಷನ್ ಆಸ್ಪತ್ರೆ ಹೆಸರನ್ನು ರಾಣಿ ಅಬ್ಬಕ್ಕ ಎಂದು ಹೆಸರು ಬದಲಾಯಿಸುವ ಮೊದಲು ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಹೇಳಿದ್ದಾರೆ.
ಅವರು ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೇಡಿಗೋಷನ್ ಆಸ್ಪತ್ರೆಯಲ್ಲಿ ಈಗಿರುವ ಮೂಲಭೂತ ಸೌಕರ್ಯ, ನೂತನ ಕಟ್ಟಡ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಂದ ಯೋಜನೆ. ಬಿಜೆಪಿ ಸರಕಾರ ಬಂದ ನಂತರ ಒಂದು ಬೆಡ್, ವೆಂಟಿಲೇಟರ್, ನರ್ಸ್ ನೇಮಕ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಮೂಲಭೂತ ಸೌಕರ್ಯ ಹೆಚ್ಚಿಸಿ, ರಾಣಿ ಅಬ್ಬಕ್ಕ ಹೆಸರಿಡುವ ವಿಚಾರ ಆಮೇಲೆ ನೋಡಬಹುದು .
ರಾಣಿ ಅಬ್ಬಕ್ಕ ಭವನಕ್ಕೆ ಸಿದ್ದರಾಮಯ್ಯ ಸಿಎಂ ಕಾಲದಲ್ಲಿ 8 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಆದ್ದರಿಂದ ಅಬ್ಬಕ್ಕ ಭವನಕ್ಕೆ ತಕ್ಷಣ ಶಂಕುಸ್ಥಾಪನೆ ನೆರವೇರಿಸಿ, ಅದು ಅಬ್ಬಕ್ಕ ರಾಣಿಗೆ ಕೊಡುವ ಕೊಡುಗೆ ಎಂದರು.
ರೇಷನ್ ಕಾರ್ಡ್, ಸ್ಕಾಲರ್‌ಶಿಪ್, ಬಡವರಿಗೆ ಮನೆ ಕೊಡಲು ಯೋಗ್ಯತೆ ಇಲ್ಲದ ಸರಕಾರವನ್ನು ಸರಕಾರ ಎಂದು ಹೇಳಲು ಸಾಧ್ಯವೇ? ಎಂದು ಈ ವೇಳೆ ವಾಗ್ದಾಳಿ ನಡೆಸಿದರು.
Kshetra Samachara
27/02/2022 01:03 pm