ಬಂಟ್ವಾಳ:ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ದೊರಕಲು ಹಾಗೂ ಸಮುದಾಯದ ಹಿತಚಿಂತನೆಗೆ ಯುಪಿಎ ಸರ್ಕಾರ ಶ್ರಮಿಸಿದ್ದು, ಮಾನವ ಧರ್ಮ ಎಲ್ಲಕ್ಕಿಂತಲೂ ದೊಡ್ಡದು ಎಂಬ ನಂಬಿಕೆಯಿಂದ ನಾವು ಬದುಕುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ಇರುವ ೧೦೦೮ ಭಗವಾನ್ ಆದಿನಾಥಸ್ವಾಮಿ ಬಸದಿಯಲ್ಲಿ ಶಿಲಾಮಯವಾಗಿ ನಿರ್ಮಾಣಗೊಂಡ ನೂತನ ಏಕಶಿಲಾ ಮಾನಸ್ತಂಭದ ಪ್ರತಿಷ್ಠಾಪೂರ್ವ ಪಂಚಕಲ್ಯಾಣ ಮಹೋತ್ಸವದಲ್ಲಿ ಸೋಮವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
600 ವರ್ಷದ ಇತಿಹಾಸ ಇರುವ ಬಸದಿಯ ಶಕ್ತಿ ಪ್ರಭಾವಶಾಲಿ. ಯಾವ ಅಧಿಕಾರ, ಅಂತಸ್ತು, ಐಶ್ವರ್ಯ ಇದ್ದರೂ ಮನಸ್ಸಿಗೆ ಸಮಾಧಾನ, ನೆಮ್ಮದಿ ಕೊಡು ಎಂದು ದೇವರಲ್ಲಿ ನಾವು ಕೇಳುತ್ತೇವೆ ಎಂದು ಹೇಳಿದ ಅವರು, ಪೂಜೆ ಯಾವುದಾದರೂ ಭಕ್ತಿ ಒಂದೇ, ದೇವನೊಬ್ಬ ನಾಮ ಹಲವು ಎನ್ನುತ್ತೇವೆ. ಧರ್ಮ ಯಾವುದೇ ಆದರೂ ಯಾರೂ ಅರ್ಜಿ ಹಾಕಿ ಅದರಲ್ಲಿ ಹುಟ್ಟಿಲ್ಲ. ತಂದೆ, ತಾಯಿಯ ನಂಬಿಕೆಯೇ ನಮ್ಮ ನಂಬಿಕೆ ಎಂದು ಧರ್ಮಸ್ಥಳ, ಮೂಡುಬಿದಿರೆ ಕ್ಷೇತ್ರಗಳ ಕುರಿತು ತನ್ನ ನಂಬಿಕೆ, ವಿಶ್ವಾಸಗಳ ಬಗ್ಗೆ ವಿವರಿಸಿದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ ಮಾತನಾಡಿ, ಎಲ್ಲರ ಮನಸ್ಸನ್ನು ಹಿಂಸೆ ಮಾಡದಂತೆ ದೇವರು ಪ್ರಚೋದನೆ ನೀಡಲಿ ಎಂದು ಹಾರೈಸಿದರು.
ಮೂಡುಬಿದಿರೆ ಜೈನಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಜೀರ್ಣೋದ್ಧಾರ ಮತ್ತು ಪಂಚಕಲ್ಯಾಣ ಸಮಿತಿ ಅಧ್ಯಕ್ಷ ಸುದರ್ಶನ ಜೈನ್, ಕಾರ್ಯದರ್ಶಿ ದೇವಕುಮಾರ್ ಇಂದ್ರ ಉಪಸ್ಥಿತರಿದ್ದರು. ಅನನ್ಯ, ಸೌಜನ್ಯ ಪ್ರಾರ್ಥಿಸಿದರು. ಪತ್ರಕರ್ತೆ ನವಿತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
07/02/2022 10:51 pm