ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಜಿಲ್ಲೆ. ಬಿಜೆಪಿ ಮತ್ತು ಪರಿವಾರ ಸಂಘಟನೆಗಳ ಭದ್ರಕೋಟೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಬಿಜೆಪಿ ನಾವೇ ಕಟ್ಟಿ ಬೆಳೆಸಿದ ಸಂಘಟನೆ. ನಮ್ಮ ವಿಚಾರವನ್ನು ಇನ್ನಷ್ಟು ಜನರಿಗೆ ತಲುಪಿಸಬೇಕಿದೆ. ನಾನು ಈ ಜಿಲ್ಲೆಯ ಉಸ್ತುವಾರಿ ಸಚಿವ ಅನ್ನೋದಕ್ಕಿಂತಲೂ ಕಾರ್ಯಕರ್ತರ ಸಚಿವನಾಗಿದ್ದೀನಿ. ನಾನು ಕಾರ್ಯಕರ್ತರಿಗೆ ಬೇಕಾದ ಎಲ್ಲಾ ನ್ಯಾಯ ಕೊಡ್ತೇನೆ. ಯಾವ ಯಾವ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆಯಾಗ್ತಿದೆ ನೋಡ್ತೇನೆ. ಕಾರ್ಯಕರ್ತರ ಧ್ವನಿಯಾಗಿ ನಾನು ಇಲ್ಲಿ ಕೆಲಸ ಮಾಡ್ತೇನೆ ಎಂದರು.
ಉಡುಪಿ ಜಿಲ್ಲೆಯ ಕೆಲ ವಿಷಯ ಗಮನಿಸಬೇಕಿದೆ. ಕಾರ್ಕಳದ ಜನರ ಋಣವನ್ನೂ ತೀರಿಸಬೇಕಿದೆ. ನಮ್ಮ ಸರ್ಕಾರ ಹಿಂದುತ್ವದ ಆಧಾರದಲ್ಲಿ ನಡೆಯೋ ಸರ್ಕಾರ. ಕರ್ನಾಟಕದಲ್ಲಿ ಇರೋದು ಹಿಂದೂ ಪರ ಸರ್ಕಾರ. ಆ ಕಾರಣದಿಂದಲೇ ನಾವು ರಾಜ್ಯದಲ್ಲಿ ಕೆಲ ನಿರ್ದಿಷ್ಟ ಯೋಜನೆಗಳನ್ನು ಪ್ರಕಟಿಸಿದ್ದೇವೆ. ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನು, ದೇವಸ್ಥಾನ ಸ್ವಾಯತ್ತತೆ ಚಿಂತನೆಗಳಿವೆ.
ಈ ಎಲ್ಲಾ ವಿಚಾರಗಳಿಗೆ ಧಕ್ಕೆ ಬಾರದಂತೆ ನಾನು ಕೆಲಸ ಮಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವ ರಾಜ್ಯದ ಉಳಿದ ಜಿಲ್ಲೆಗಳಿಗೂ ಆಗಬೇಕು. ಕಾಂಗ್ರೆಸ್ ಅಪಪ್ರಚಾರದ ಮೂಲಕ ಭ್ರಮೆಯಲ್ಲಿಯೇ ತೇಲಾಡುತ್ತಿದೆ. ಮೇಕೆದಾಟು ಮತ್ತು ಶ್ರೀ ನಾರಾಯಣ ಗುರು ವಿಚಾರದಲ್ಲಿ ಕಾಂಗ್ರೆಸ್ ಅಪಪ್ರಚಾರದಲ್ಲಿಯೇ ತೊಡಗಿದೆ ಎಂದು ಕಿಡಿಕಾರಿದರು.
Kshetra Samachara
29/01/2022 11:21 am