ಸುಬ್ರಹ್ಮಣ್ಯ: ಸುಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯವನ್ನು ಜಗತ್ಪ್ರಸಿದ್ಧಗೊಳಿಸುವ ನಿಟ್ಟಿನಲ್ಲಿ ಬೃಹತ್ ಮೊತ್ತದ ಮಾಸ್ಟರ್ ಪ್ಲಾನ್ ಗೆ ಸಿದ್ಧತೆ ನಡೆದಿದ್ದು, 300 ಕೋಟಿ ರೂ. ವೆಚ್ಚದ ಈ ಮಾಸ್ಟರ್ ಪ್ಲಾನ್ ಗೆ ಸಿಎಂ ಬಸವರಾಜ್ ಬೊಮ್ಮಾಯಿ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ. ಯೋಜನೆ ಡಿಪಿಆರ್ ಸಹಿತ ಎಲ್ಲವೂ ಸಿದ್ಧವಾಗಿದ್ದು, 2 ವರ್ಷದೊಳಗೆ ಪೂರ್ಣಗೊಳಿಸಲು ಗಡುವನ್ನೂ ಹಾಕಿಕೊಳ್ಳಲಾಗಿದೆ.
ಈಗಾಗಲೇ ಕ್ಷೇತ್ರದಲ್ಲಿ 180 ಕೋಟಿ ರೂ. ವೆಚ್ಚದ 1ನೇ, 2ನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿ ಮುಕ್ತಾಯಗೊಂಡಿದ್ದು, ಇದೀಗ ಮತ್ತೆ 300 ಕೋಟಿ ವೆಚ್ಚದ ಕಾಮಗಾರಿಗೆ ಸಿದ್ಧತೆ ನಡೆದಿದೆ. ಮುಖ್ಯವಾಗಿ ದೇವಸ್ಥಾನದ ರಥಬೀದಿ ಇಕ್ಕೆಲದಲ್ಲೂ ಶಿಲಾಮಯ ಪಾರಂಪರಿಕೆ ಶೈಲಿ ಕಟ್ಟಡ ತಲೆ ಎತ್ತಲಿದೆ. ಈ ಕಟ್ಟಡಗಳನ್ನು 3 ಪಾರಂಪರಿಕ ವಿನ್ಯಾಸದಲ್ಲಿ ಕಟ್ಟಲಾಗುತ್ತಿದ್ದು, ಮುಂಭಾಗ ವಿಜಯನಗರ ಶೈಲಿ, ಒಳಭಾಗ ಮೈಸೂರು ಶೈಲಿ, ಛಾವಣಿ ದ.ಕ. ಶೈಲಿಯಲ್ಲಿ ನಿರ್ಮಾಣವಾಗಲಿದೆ. ಮುಂದಿನ 2000 ವರ್ಷಗಳವರೆಗೂ ಕಟ್ಟಡ ವಿನ್ಯಾಸ ಬದಲಿಸದಂತಹ ರೀತಿ ನಿರ್ಮಾಣವಾಗಲಿದೆ ಎಂದು ಸಚಿವ ಎಸ್. ಅಂಗಾರ ಮಾಹಿತಿ ನೀಡಿದ್ದಾರೆ.
ಆಶ್ಲೇಷ ಬಲಿ ಪೂಜೆಗೆ ಹೊಸ ಮಂಟಪ ಸಿದ್ಧಗೊಳ್ಳಲಿದ್ದು, ಒಂದೇ ಬಾರಿಗೆ 250 ಪೂಜೆಗಳನ್ನು ಕುಟುಂಬ ಸಮೇತ ನಡೆಸಲು 4 ಮಂಟಪ ನಿರ್ಮಾಣವಾಗಲಿದೆ. ಈ ಮೂಲಕ ದಿನಕ್ಕೆ 1000 ಪೂಜೆ ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ. ಒಂದೇ ಬಾರಿಗೆ 3500 ಭಕ್ತರಿಗೆ ಅನ್ನ ಸಂತರ್ಪಣೆ ಛತ್ರ ನಿರ್ಮಾಣಗೊಳ್ಳಲಿದೆ. ಪ್ರಕೃತಿ- ಯೋಗ ಚಿಕಿತ್ಸಾಲಯ ಜತೆಗೆ ವಿಷ ಜಂತು ಕಡಿತಕ್ಕೊಳಗಾದವರ ಚಿಕಿತ್ಸೆಗೆ ವಿಶೇಷ ಚಿಕಿತ್ಸಾಲಯವೂ ಈ ಮಾಸ್ಟರ್ ಪ್ಲಾನ್ ಒಳಗೊಂಡಿದೆ.
Kshetra Samachara
08/01/2022 05:06 pm