ಮಂಗಳೂರು: ಪತ್ರಿಕೋದ್ಯಮ ಜನತೆ ಹಾಗೂ ಸರಕಾರದ ನಡುವಿನ ಸೇತುವೆಯಿದ್ದಂತೆ. ಅದೇ ಆಶಯದೊಂದಿಗೆ ಪತ್ರಿಕೋದ್ಯಮ ನಿರಂತರವಾಗಿ ಸಾಗುತ್ತಾ ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮಕ್ಕೆ ಭವಿಷ್ಯವಿಲ್ಲ, ಬಹಳ ದಿನ ಉಳಿಯಲಿಕ್ಕಿಲ್ಲ ಎಂಬ ಮಾತು ಕೇಳಲಾರಂಭಿಸಿದೆ. ಈ ಮಾತು 2000ನೇ ಇಸವಿಯಿಂದಲೂ ಕೇಳುತ್ತಾ ಬರುತ್ತಿದ್ದೇನೆ. ಆದರೆ, ಆ ಬಳಿಕದ 20 ವರ್ಷಗಳ ಬಳಿಕವೂ ಪತ್ರಿಕೋದ್ಯಮ ಅತಿ ಗಟ್ಟಿಯಾಗಿ ಜೀವಂತವಾಗಿದೆ ಎಂದು ಪತ್ರಕರ್ತ ಶ್ರೀಕೃಷ್ಣ ಭಟ್ ಅಳದಂಗಡಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಇಂದು ಸುದ್ದಿಮನೆಯಲ್ಲಿ ಎಲ್ಲವನ್ನೂ ನಿಭಾಯಿಸಬಲ್ಲ ಪತ್ರಕರ್ತರ ಅಗತ್ಯವಿದೆ. ಇಂದು ಪತ್ರಕರ್ತನಾದವನಿಗೆ ಬರವಣಿಗೆ ಜತೆಗೆ ವಾಕ್ಚಾತುರ್ಯದ ಅಗತ್ಯವಿದೆ. ನಾವು ಬರೆದಿದ್ದನ್ನು, ತಿಳಿದುಕೊಂಡಿದ್ದನ್ನು ಇನ್ನೊಬ್ಬರ ಮುಂದೆ ಪ್ರಸ್ತುತಪಡಿಸುವ ಕೌಶಲ್ಯ ಹೊಂದಿರುವುದು ಅಷ್ಟೇ ಮುಖ್ಯ. ಟಿವಿ ಮಾಧ್ಯಮದಲ್ಲಿ ಈ ಕಲೆಗಾರಿಕೆ ಪ್ರಮುಖ ಪಾತ್ರ ವಹಿಸುವ ಜತೆಗೆ ಪತ್ರಿಕಾ ಮಾಧ್ಯಮದಲ್ಲೂ ಇದು ಇಂದಿನ ಅಗತ್ಯ ಎಂದರು.
ಆದರ್ಶ ಪ್ರತಿಕೋದ್ಯಮ ಜನರ ನೋವು ಸಂಕಷ್ಟಕ್ಕೆ ಸ್ಪಂದಿಸಬೇಕು. ಮಾಧ್ಯಮಗಳೂ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದೆ ಕೂಡಾ. ಆದರೆ, ವಾಸ್ತವದ ಪತ್ರಿಕೋದ್ಯಮ ಆ ರೀತಿ ಇಲ್ಲ. ಆದರೆ, ಬರೀ ಆದರ್ಶ ಇಟ್ಟು ಮುಂದುವರಿಯುವುದರಿಂದ ಪತ್ರಿಕೋದ್ಯಮ ನಡೆಸುವುದು ಬಹಳ ಕಷ್ಟ. ಪತ್ರಿಕೋದ್ಯಮ ಇಂದು ಉದ್ಯಮ ಆಗದಿದ್ದಲ್ಲಿ ಖಂಡಿತಾ ಮಾಧ್ಯಮದಲ್ಲಿ ಯಾರಿಗೂ ಕೆಲಸ ಉಳಿಯೋದಿಲ್ಲ. ಉದ್ಯಮ ಎಂದರೆ ಸರಕಾರದ ಓಲೈಕೆಯಲ್ಲ, ಬದಲಾಗಿ ಔದ್ಯಮಿಕ ಶಿಸ್ತಿನ ಅಗತ್ಯವಿದೆ ಎಂದು ಶ್ರೀಕೃಷ್ಣ ಭಟ್ ಹೇಳಿದರು.
Kshetra Samachara
16/11/2021 09:06 pm