ಕಾರ್ಕಳ: ಕಾರ್ಕಳ ಪುರಸಭೆ ಮಾಸಿಕ ಸಭೆಯು ಪ್ರತಿಭಟನೆ ಆರೋಪ ಪ್ರತ್ಯಾರೋಪದ ಮಾತಿನ ಚಕಮಕಿಯೊಂದಿಗೆ ನಡೆದ ನಂತರ ಪುರಸಭೆ ಸದಸ್ಯರು ಬಂಡಿಮಠದ ಇಂದಿರಾ ಕ್ಯಾಂಟೀನ್ ನಲ್ಲಿ ಸೌಹಾರ್ದ ಸಹಭೋಜನ ಸವಿದ ಪ್ರಸಂಗ ನಡೆಯಿತು.
ಕಳೆದ ತಿಂಗಳ ಮಾಸಿಕ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರೊಬ್ಬರು ಸಭೆಯ ಸಂದರ್ಭ ಸದಸ್ಯರಿಗೆ ನೀಡುವ ಉಪಹಾರದ ಗುಣಮಟ್ಟ ಚೆನ್ನಾಗಿಲ್ಲ, ಇಂತಹ ಉಪಾಹಾರವನ್ನು ನಮಗೆ ನೀಡಿ ಹೆಚ್ಚಿನ ಹಣವನ್ನು ಹೋಟೆಲ್ ಗಳಿಗೆ ಪಾವತಿಸುತ್ತೀರ ಎಂದು ಆರೋಪ ಮಾಡಿದ್ದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರೊಬ್ಬರು ಮುಂದಿನ ಸಭೆಗೆ ಇಂದಿರಾ ಕ್ಯಾಂಟೀನ್ ನಿಂದಲೇ ಊಟ ಉಪಹಾರ ತರಿಸೋಣ ಎಂದು ಪ್ರತ್ಯುತ್ತರ ನೀಡಿದ್ದರು .ಅದನ್ನೇ ಮುಖ್ಯ ವಿಷಯವಾಗಿ ತೆಗೆದುಕೊಂಡು ಸದಸ್ಯರು ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ನಿಂದಲೇ ಊಟದ ವ್ಯವಸ್ಥೆ ಮಾಡುವ ತೀರ್ಮಾನವನ್ನು ಕೈಗೊಂಡಿದ್ದರು .ಆದರೆ ಪಾರ್ಸೆಲ್ ವ್ಯವಸ್ಥೆ ಇಲ್ಲದ ಕಾರಣ ಪುರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಗೆ ತೆರಳಿ ಊಟದ ರುಚಿ ಸವಿದರು. ಬಳಿಕ ಇಂದಿರಾ ಕ್ಯಾಂಟೀನ್ ನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
Kshetra Samachara
26/10/2021 12:40 pm