ಮಂಗಳೂರು: ನೈತಿಕ ಪೊಲೀಸ್ ಗಿರಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳುವ ಮೂಲಕ ಶಾಂತಿ ಕದಡುವ ಕೃತ್ಯ ಎಸಗಿದ್ದಾರೆ. ಇದು ಸಂವಿಧಾನ ಒಪ್ಪುವ ಮಾತಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರಿದಲ್ಲಿ ರಾಜ್ಯದ ಸ್ಥಿತಿ ವಿಕೋಪಕ್ಕೆ ತಲುಪಲಿದೆ ಎಂದು ದಲಿತ ಹೋರಾಟಗಾರ ಬಿ.ಆರ್. ಭಾಸ್ಕರ್ ಪ್ರಸಾದ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಎಸ್‌ಡಿಪಿಐ ನೂತನ ಪದಾಧಿಕಾರಿಗಳ ಸಂವಿಧಾನ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ ರೀತಿ ಬಿಗಡಾಯಿಸಲಿದೆ ಎಂದು ಹೇಳಲಸಾಧ್ಯ. ಹಿಂದೆ ಕಂಬಾಲಪಲ್ಲಿಯಲ್ಲಿ ನಡೆದ ಏಳು ದಲಿತರ ಸಜೀವ ದಹನ ಪ್ರಕರಣ, ಶಹಾಪುರದಲ್ಲಿ ದಲಿತ ಯುವತಿಯ ಬೆತ್ತಲೆಗೊಳಿಸಿ ಹಲ್ಲೆಗೈದ ಪ್ರಕರಣ, ತುಮಕೂರು ದಲಿತ ಕೃಷಿಕನ ಮನೆಗೆ ಬೆಂಕಿ ಹಚ್ಚಿದ ಪ್ರಕರಣ ನಡೆದಾಗ ದಲಿತರು ಕೂಡ ಇದೇ ರೀತಿ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಹಿನ್ನೆಲೆಯಲ್ಲಿ ವರ್ತಿಸಿದ್ದಲ್ಲಿ ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿತ್ತು ಎಂದರು.
ಇತ್ತೀಚೆಗೆ ಸಂಘ ಪರಿವಾರ ಮಾಡಿರುವ ತ್ರಿಶೂಲ ದೀಕ್ಷೆ ಪೈಶಾಚಿಕ ಕೃತ್ಯದ ಹುನ್ನಾರ. ಆ ದೀಕ್ಷೆಗೆ ಸೆಡ್ಡು ಹೊಡೆಯುವ ದೀಕ್ಷೆ ಎಸ್ ಡಿಪಿಐ ಮಾಡುತ್ತಿರುವ ಸಂವಿಧಾನ ದೀಕ್ಷೆಯಲ್ಲ. ನಮಗೆ ಯಾರಿಗೂ ಸೆಡ್ಡು ಹೊಡೆಯುವ ಅಗತ್ಯವಿಲ್ಲ. ನಾವು ದೇಶವನ್ನು ಗೌರವಿಸುವ ಕೆಲಸ ಮಾಡೋಣ, ಸ್ನೇಹ ಬೆಳೆಸೋಣ. ಇಲ್ಲಿನ ಭ್ರಾತೃತ್ವಕ್ಕೆ ಅಪಾಯಕಾರಿಯಾಗಿ ಯಾರು ಕೆಲಸ ಮಾಡುತ್ತಾರೋ ಅಂತಹವರ ಪಕ್ಕ ಸುಳಿಯುವುದೂ ಇಲ್ಲ. ಭ್ರಾತೃತ್ವ, ಸಮಾನತಾವಾದ ಗೌರವಿಸುವುದು ಎಸ್‌ಡಿಪಿಐನ ಸಂವಿಧಾನ ದೀಕ್ಷೆಯ ಉದ್ದೇಶ ಎಂದು ಬಿ.ಆರ್. ಭಾಸ್ಕರ್ ಪ್ರಸಾದ್ ಹೇಳಿದರು.
Kshetra Samachara
25/10/2021 10:10 pm