ಮುಲ್ಕಿ: ಪಕ್ಷಿಕೆರೆ ಸಮಿಪದ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ 2021 -22ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಕೆಮ್ರಾಲ್ ಗ್ರಾ.ಪಂ. ಸಮುದಾಯಭವನದಲ್ಲಿ ನಡೆಯಿತು
ಗ್ರಾಮಸಭೆಗೆ ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ ಬೀಟ್ ಪೊಲೀಸ್ ಸಹಿತ ಅನೇಕ ಅಧಿಕಾರಿಗಳು ಗೈರಾದ ಬಗ್ಗೆ ಗ್ರಾಮಸ್ಥ ಹಾಗೂ ಸಾಮಾಜಿಕ ಕಾರ್ಯಕರ್ತ ನಿತಿನ್ ವಾಸ್ ಆಕ್ರೋಶ ವ್ಯಕ್ತಪಡಿಸಿ ಕಾಟಾಚಾರಕ್ಕೆ ಗ್ರಾಮ ಸಭೆ ಮಾಡುವುದು ಮಾಮೂಲಿಯಾಗಿದೆ. ಕೊರೊನಾ ಸಂಕಷ್ಟದ ದಿನಗಳಲ್ಲಿ ಪೊಲೀಸರಿಗೆ ವಾಹನಗಳನ್ನು ನಿಲ್ಲಿಸಿ ದಂಡ ವಿಧಿಸಲು ಸಮಯವಿದೆ ಆದರೆ ಗ್ರಾಮ ಸಭೆಗೆ ಬರಲು ಯಾಕೆ ನಿರ್ಲಕ್ಷ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಹಿರಿಯ ನಾಗರಿಕ ಬಾಲಾದಿತ್ಯ ಆಳ್ವ ಬೆಂಬಲ ಸೂಚಿಸಿದರು.
ಹಳೆಯಂಗಡಿ ಪಕ್ಷಿಕೆರೆ ಲೋಕೋಪಯೋಗಿ ಇಲಾಖೆ ರಸ್ತೆಯ ಪಕ್ಷಿಕೆರೆ ಕಾನ್ವೆಂಟ್ ಬಳಿ ರಸ್ತೆ ತೀರಾ ಕೆಟ್ಟುಹೋಗಿದ್ದು ಪ್ರತಿವರ್ಷವೂ ಕಳಪೆ ಕಾಮಗಾರಿ ನಡೆಯುತ್ತಿದ್ದು ಸರಕಾರದ ಹಣ ಪೋಲಾಗುತ್ತಿದೆ ಎಂದು ದಿನೇಶ್ ಹರಿಪಾದ ದೂರಿದರು. ಕಾಮಗಾರಿ ಸರಿಯಾಗಿ ನಡೆಸಲು ತಾಕತ್ತಿಲ್ಲದಿದ್ದರೆ ನಾವು ನಡೆಸುತ್ತೇವೆ. ಕೆಟ್ಟುಹೋದ ರಸ್ತೆಯಿಂದ ಮಳೆಗಾಲದಲ್ಲಿ ಬೃಹದಾಕಾರದ ಹೊಂಡಗಳು ಉಂಟಾಗಿದ್ದು ಅನೇಕ ಅಪಘಾತಗಳು ಸಂಭವಿಸಿ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಉತ್ತರಿಸಲು ಸಂಬಂಧಪಟ್ಟ ಅಧಿಕಾರಿಗಳು ಗೈರಾಗಿದ್ದಾರೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕೆಮ್ರಾಲ್ ಪರಿಸರದಲ್ಲಿ ಶಾಲೆಗಳು ಆರಂಭವಾಗಿದ್ದು ಮಕ್ಕಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸುವ ವ್ಯವಸ್ಥೆ ಇದೆಯಾ? ಈ ಬಗ್ಗೆ ಸರಿಯಾಗಿ ಪರಿಶೀಲಿಸಿದ್ದೀರಾ? ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಮಕ್ಕಳು ಶಾಲೆಗೆ ಬರುತ್ತಿದ್ದು ದುಬಾರಿಯಾಗಬಹುದು ಎಂದು ದಿನೇಶ್ ಹರಿಪಾದ ಆತಂಕ ವ್ಯಕ್ತಪಡಿಸಿದರು.
ಕೃಷಿಕ ಸತೀಶ್ ಶೆಟ್ಟಿ ಬೈಲಗುತ್ತು ಮಾತನಾಡಿ ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ಪಂಜ ಪ್ರದೇಶದಲ್ಲಿ ಕೃಷಿ ಜೀವನಾಡಿಯಾಗಿದ್ದು ಬೆಳೆದ ಕೃಷಿಗೆ ಕಾಡುಪ್ರಾಣಿಗಳ ಹಾವಳಿಯಿಂದ ಪೈರು ನಾಶವಾಗುತ್ತಿದೆ. ಬೆಳೆ ವಿಮೆ ಮಾಡಿದರೂ ಕೇಳುವ ಗತಿ ಇಲ್ಲ ಎಂದು ದೂರಿದರು.
ಕಳೆದ 40 ವರ್ಷಗಳಿಂದ ಪಕ್ಷಿಕೆರೆ ಪಂಜ ಪ್ರಧಾನ ರಸ್ತೆಯ ಅಂಗಡಿ ಬಳಿ ರಸ್ತೆ ಕೆಟ್ಟುಹೋಗಿದ್ದು ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ದೂರಿದರು.
ಪಂಜ ನದಿ ಪ್ರದೇಶದಲ್ಲಿ ಎಗ್ಗಿಲ್ಲದೆ ಮರಳುಗಾರಿಕೆ ನಡೆಯುತ್ತಿದ್ದು ನದಿ ಕೊರತೆ ಉಂಟಾಗಿದೆ ಎಂಬ ದೂರು ಕೇಳಿ ಬಂತು.
ಕೆಮ್ರಾಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ, ಕೋವಿಡ್ ನಲ್ಲಿ ನಿಧನಹೊಂದಿದವರ ಬಗ್ಗೆ ಸರ್ವೆ ನಡೆಸಿ ಪರಿಹಾರ ದೊರಕಿಸುವ ಬಗ್ಗೆ ನಿರ್ಣಯ ಮಾಡಬೇಕೆಂದು ಗ್ರಾಮಸ್ಥ ಬಾಲಾದಿತ್ಯ ಆಳ್ವ ಆಗ್ರಹಿಸಿದರು.
ಸಭೆಯಲ್ಲಿ ಕೋವಿಡ್ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಿದ ನೆಲೆಯಲ್ಲಿ ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿತ್ರ ಮತ್ತು ಸಿಬ್ಬಂದಿಯನ್ನು ಗೌರವಿಸಲಾಯಿತು.
ಕೆಮ್ರಾಲ್ ಗ್ರಾಪಂ ಅಧ್ಯಕ್ಷ ಲೀಲಾ ಕೃಷ್ಣಪ್ಪ, ಉಪಾಧ್ಯಕ್ಷ ಸುರೇಶ್ ಪಂಜ, ಸದಸ್ಯರಾದ ಮಯ್ಯದ್ದಿ, ಜಾಕ್ಸನ್, ರೇವತಿ, ನವೀನ್ ಸಾಲ್ಯಾನ್, ಪಿಡಿಒ ಅರುಣ್ ಪ್ರದೀಪ್ ಡಿಸೋಜಾ, ಕಾರ್ಯದರ್ಶಿ ಹರಿಶ್ಚಂದ್ರ,ಸಿಬ್ಬಂದಿ ಕೇಶವ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/09/2021 03:20 pm