ಮಂಗಳೂರು : ಒಕ್ಕೂಟ ಸರಕಾರ ತಂದಿರುವ ಕೃಷಿ ಮಸೂದೆಗಳ ವಾಪಸ್ಸಾತಿಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಲು ಆಗ್ರಹಿಸಿ ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ಐತಿಹಾಸಿಕ ನಿರಂತರ ಚಳುವಳಿಗೆ ಸೆಪ್ಟೆಂಬರ್ 26ನೇ ತಾರೀಖಿಗೆ ಹತ್ತು ತಿಂಗಳು ತುಂಬಲಿದೆ. ಈ ಪ್ರಯುಕ್ತ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಹಾಗೂ ಸಂಯುಕ್ತ ಹೋರಾಟ ಕರ್ನಾಟಕವೂ ಭಾರತ್ ಬಂದ್‌ನ್ನು ಬೆಂಬಲಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ರೈತ ದಲಿತ ಕಾರ್ಮಿಕ ಹಾಗೂ ಜನಪರ ಚಳುವಳಿಗಳ ಒಕ್ಕೂಟ ದಕ್ಷಿಣ ಕನ್ನಡ ಭಾರತ್ ಬಂದ್ ಬೆಂಬಲಿಸಿ ಹಲವು ಪ್ರಮುಖ ವಿಚಾರಗಳನ್ನು ಮುಂದಿಟ್ಟು ಸೆಪ್ಟೆಂಬರ್ 27 ರ ಬೆಳಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕಿನ ಬಿಸಿರೋಡಿನ ಮಿನಿ ವಿಧಾನಸೌಧದ ಬಳಿಯಿಂದ ಕಾಲ್ನಡಿಗೆಯಲ್ಲಿ ಹೊರಟು ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬೃಹತ್ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ಯಾದವ ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್ ಹಾಗೂ ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.
Kshetra Samachara
22/09/2021 01:27 pm