ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೋದಿ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿದ ಯುವ ಕಾಂಗ್ರೆಸ್

ಮಂಗಳೂರು: ಪ್ರಧಾನಿ ಮೋದಿಯವರ ಜನ್ಮದಿನವಾದ ಇಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿದರು. ನಗರದ ಕ್ಲಾಕ್ ಟವರ್ ಬಳಿ ಪಕೋಡಾ ಮಾಡಿ ಮಾರುವ ಮೂಲಕ, ಶೂ ಫಾಲೀಶ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈಯವರು, ಬಿಜೆಪಿ ಅಧಿಕಾರವನ್ನು ಬರುವ ವೇಳೆ ಬೆಲೆ ಏರಿಕೆ ಕಡಿಮೆ ಮಾಡುವ, ನಿರುದ್ಯೋಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಅಲ್ಲದೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಬಗ್ಗೆ ಮಾತು ನೀಡಿದ್ದರು‌. ಆದರೆ ಈವರೆಗೆ ಯಾವುದೇ ಭರವಸೆ ಈಡೇರಿಸಿಲ್ಲ. ಇಂದು ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿದ್ದು, ನಿರುದ್ಯೋಗ ತಾಂಡವವಾಡುತ್ತಿದೆ. ಇಂದು ಸರಕಾರಕ್ಕೆ ಹಣದ ಅವಶ್ಯಕತೆ ಇದ್ದು, ಅದನ್ನು ಜನೆಯ ಮೇಲೆ ಹೊರೆ ಹಾಕುತ್ತಿದ್ದಾರೆ. ಜೊತೆಗೆ ಸಬ್ಸಿಡಿ ಎಂಬ ಪದ ನಿಲ್ಲಿಸಿ ಬಹಳ ಕಾಲಗಳೇ ಆಯಿತು ಎಂದರು.

ಪ್ರಧಾನಿ ಮೋದಿಯವರು ಸರಕಾರಿ ಸ್ವಾಯತ್ತ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳ ಶಾಹಿಗಳ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದೆ ಯುಪಿಎ ಸರಕಾರವಿದ್ದಾಗ ಬೆಲೆ ಏರಿಕೆಯಾದಾಗ ವಾಜಪೇಯಿ ಅವರು‌ ಇದೊಂದು ಕ್ರಿಮಿನಲ್ ಲೂಟಿ ಎಂದಿದ್ದರು. ಆದರೆ ಈಗ ಬೆಲೆ ಏರಿಕೆ ಮಿತಿ ಮೀರುತ್ತಿದ್ದು, ನಾನು ವಾಜಪೇಯಿ ಅವರ ಭಾಷೆಯಲ್ಲಿಯೇ ಹೇಳುವುದಾದರೆ ಈಗ ನಡೆಯುತ್ತಿರುವುದು ಕ್ರಿಮಿನಲ್ ಲೂಟಿಯೇ ಎಂದು ರಮಾನಾಥ ರೈ ಕಿಡಿಕಾರಿದರು.

Edited By : Manjunath H D
Kshetra Samachara

Kshetra Samachara

17/09/2021 08:00 pm

Cinque Terre

32.7 K

Cinque Terre

3