ವರದಿ: ರಹೀಂ ಉಜಿರೆ
ಕೋಟ:ಅಂತೂ ಇಂತೂ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟ ಇವತ್ತು ಅಸ್ತಿತ್ವಕ್ಕೆ ಬಂದಿದೆ.ನೂತನ ಸಂಪುಟದಲ್ಲಿ ಉಡುಪಿ ಜಿಲ್ಲೆಗೆ ಎರಡು ಮಂತ್ರಿ ಸ್ಥಾನ ಸಿಕ್ಕಿದ್ದು ಸಿಹಿಯ ವಿಷಯವಾದರೆ, ಮಂತ್ರಿ ಸ್ಥಾನ ಕೊಡಲೇಬೇಕು ಎಂದು ಬೆಂಬಲಿಗರು ಅಭಿಯಾನ ನಡೆಸಿ ತೀವ್ರ ಒತ್ತಡ ಹೇರಿದ್ದರೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮಂತ್ರಿ ಸ್ಥಾನ ಸಿಗದೇ ಇರುವುದು ಜಿಲ್ಲೆಯ ಜನರಿಗೆ ನಿರಾಶೆ ತಂದಿದೆ.
ಈ ಬಾರಿಯ ಸಚಿವ ಸಂಪುಟ ಬಿಜೆಪಿ ಹೈಕಮಾಂಡಿಗೆ ದೊಡ್ಡ ತಲೆನೋವಾಗಿತ್ತು. ವಾರದ ಬಳಿಕ ಜಿಲ್ಲಾವಾರು, ಜಾತಿವಾರು ಲೆಕ್ಕಾಚಾರದ ಬಳಿಕ ಇವತ್ತು ಉಡುಪಿ ಜಿಲ್ಲೆಯ ಇಬ್ಬರು ಶಾಸಕರು ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಎರಡು ಬಾರಿ ಸಚಿವರಾಗಿದ್ದ ಸಿಂಪಲ್ ಶ್ರೀನಿವಾಸ ಎಂದೇ ಖ್ಯಾತರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮತ್ತೊಮ್ಮೆ ಮಂತ್ರಿ ಸ್ಥಾನ ಒಲಿದು ಬಂದಿದೆ.ಇನ್ನು ಕಾರ್ಕಳ ಕ್ಷೇತ್ರದಿಂದ ಮೂರು ಬಾರಿ ಎಂಎಲ್ಎ ಆಗಿ ಆಯ್ಕೆಯಾಗಿರುವ ಯುವನಾಯಕ ಸುನಿಲ್ ಕುಮಾರ್ ಅವರ ಅದೃಷ್ಟ ಕುದುರಿದೆ. ಸುನೀಲ್ ಕುಮಾರ್ ಮಂತ್ರಿಯಾಗಿ ಇವತ್ತು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಹುತೇಕ ಮಂತ್ರಿಗಳು ಕುಟುಂಬ ಸಮೇತ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದರೆ, ಕೋಟ ಶ್ರೀನಿವಾಸ ಪೂಜಾರಿಯವರ ಕುಟುಂಬ ಹುಟ್ಟೂರು ಕೋಟಾದ ಮನೆ ಬಿಟ್ಟು ಕದಲಲಿಲ್ಲ.ಕೋಟ ಮೂರನೇ ಬಾರಿಗೆ ಸಚಿವರಾದ ಹಿನ್ನೆಲೆಯಲ್ಲಿ ಅವರ ಹುಟ್ಟೂರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
ಮಾಧ್ಯಮದ ಜತೆ ಮಾತನಾಡಿದ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾಂತಾ,ಶ್ರೀನಿವಾಸ ಪೂಜಾರಿ ಅವರ ಪ್ರಾಮಾಣಿಕ ಕೆಲಸಕ್ಕೆ ಮತ್ತೆ ಅವಕಾಶ ಸಿಕ್ಕಿದೆ.ಪ್ರಾಮಾಣಿಕತೆ, ಸರಳತೆ ಮತ್ತು ಕಠಿಣ ಪರಿಶ್ರಮವೇ ಅವರ ಮರು ಆಯ್ಕೆಗೆ ಕಾರಣ.ಯಾವುದೇ ಲಾಬಿ ನಡೆಸಿದೆ ಅವರಿಗೆ ಸಚಿವಗಿರಿ ಸಿಕ್ಕಿದೆ.ನಮಗೆ ತುಂಬ ಖುಷಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಕುಂದಾಪುರ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಕುಂದಾಪುರದ ವಾಜಪೇಯಿ ಎಂದೇ ಹೆಸರಾಗಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬೆಂಬಲಿಗರಿಗೆ ತೀವ್ರ ನಿರಾಸೆಯಾಗಿದೆ. ನಾನು ಕಾಡಿಬೇಡಿ ಸಚಿವ ಸ್ಥಾನ ಪಡೆದುಕೊಳ್ಳುವುದಿಲ್ಲ ಎಂದು ಈ ಮೊದಲು ಹೇಳಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಇವತ್ತು ಬೆಂಗಳೂರಿಗೂ ಹೋಗದೆ ಪ್ರತಿಕ್ರಿಯೆಗೂ ಸಿಗಲಿಲ್ಲ.ಹಾಲಾಡಿಯವರನ್ನು ಮಂತ್ರಿ ಮಾಡಬೇಕು ಎಂದು ಅವರ ಬೆಂಬಲಿಗರು ಬೇರೆ ಬೇರೆ ರೀತಿಯಲ್ಲಿ ಅಭಿಯಾನವನ್ನೇ ನಡೆಸುತ್ತಿದ್ದರು.ಆದರೆ ಬಿಜೆಪಿ ಹೈಕಮಾಂಡ್ ಈ ಬಾರಿಯೂ ಈ ಸಜ್ಜನ ರಾಜಕಾರಣಿಯನ್ನು ಗಣನೆಗೆ ತೆಗೆದುಕೊಂಡಿಲ್ಲ.ಹೀಗಾಗಿ ಈ ಬಾರಿಯೂ ಕೂಡ ಕುಂದಾಪುರ ಕ್ಷೇತ್ರದ ಜನತೆಗೆ ನಿರಾಸೆ ಉಂಟಾಗಿದೆ.ಇಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು ಜಿಲ್ಲೆಯ ಜನರಿಗೆ ಸಿಹಿ ತಂದರೆ, ಹಾಲಾಡಿ ವಿಷಯದಲ್ಲಿ ಕ್ಷೇತ್ರದ ಜನ ಮತ್ತೊಮ್ಮೆ ಕಹಿ ಅನುಭವವಾಗಿದೆ.
Kshetra Samachara
04/08/2021 06:39 pm