ಮಂಗಳೂರು: ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕ- ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಫೆ. 11ರಿಂದ ಫೆ. 25ರ ವರೆಗೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ನಡೆಯಲಿದೆ ಎಂದು ಸಂಚಾಲಕ ಮೋಹನ್ ದಾಸ ಕೊಟ್ಟಾರಿ ಮುನ್ನೂರು ಹೇಳಿದರು.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಒಟ್ಟು 15 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಫೆ.11 ರಂದು ಸಂಜೆ 4.30ಕ್ಕೆ ನಡೆಯುವ ಉದ್ಘಾಟನೆ ಸಮಾರಂಭಕ್ಕೆ ಮುನ್ನ ಬಿ.ಸಿ. ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಮೈದಾನದವರೆಗೆ ವಿವಿಧ ಜಾನಪದ ಕಲಾ ತಂಡಗಳ ಸೇರುವಿಕೆಯಲ್ಲಿ ಜಾನಪದ ದಿಬ್ಬಣ ಮೆರವಣಿಗೆ ನಡೆಯಲಿದೆ.
ನಂತರ ಕೃಷಿ ಮೇಳ, ಕರಾವಳಿ ಕಲೋತ್ಸವದ ಉದ್ಘಾಟನೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ. ಡಾ.ಎಪಿಜೆ ಅಬ್ದುಲ್ ಕಲಾಂ ವೇದಿಕೆಯನ್ನು ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ರಮಾನಾಥ ರೈ ವಸ್ತು ಮಳಿಗೆ ಉದ್ಘಾಟಿಸಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹಾಗೆಯೇ ಶಾಸಕ ಯು.ಟಿ. ಖಾದರ್ ಅಮ್ಯೂಸ್ ಮೆಂಟ್ ಪಾರ್ಕನ್ನು ಉದ್ಘಾಟಿಸಲಿದ್ದಾರೆ ಎಂದರು. ಈ ಸಂದರ್ಭ ಚಿಣ್ಣರ ಲೋಕ ಸೇವಾ ಟ್ರಸ್ಟ್ ಸಂಸ್ಥೆಯ ಅಡಿಯಲ್ಲಿ ಮೂಡಿ ಬಂದ ಐಸಿರಿ ಕನ್ನಡ, ತುಳು ಅಲ್ಬಂ ಗೀತೆಯ ಬಿಡುಗಡೆ ನಡೆಯಲಿದೆ.
ಫೆ. 13ರಂದು ಕರಾವಳಿ ಧಪ್ ಸ್ಪರ್ಧೆ, ಫೆ. 14 ಕರಾವಳಿ ಸರಿಗಮಪ, ಫೆ.15 ರಂದು ಕರಾವಳಿ ಡ್ಯಾನ್ಸ್ ಕರಾವಳಿ ರಾಜ್ಯ ಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ, ಫೆ.16 ನಾಟಕೋತ್ಸವ, ಫೆ.21 ಚೆಂಡೆ ಕಲಾವಿದರ ಸಮಾವೇಶ, ಫೆ. 22 ರಂಗ ಭೂಮಿ ಕಲಾವಿದರ ಸಮಾವೇಶ, ಫೆ.24 ಮಾಪುಲೆ ಪಾಟ್ಟ್ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ, 25 ರಂದು ಸಮಾರೋಪ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಸಂಚಾಲಕ ಮೋಹನದಾಸ್ ಕೊಟ್ಟಾರಿ ಮುನ್ನೂರು, ಸಮಿತಿ ಸದಸ್ಯರಾದ ಸರಪಾಡಿ ಅಶೋಕ್ ಶೆಟ್ಟಿ, ರಮೇಶ್ ರೈ ಕುಕ್ಕುವಳ್ಳಿ, ಪ್ರಕಾಶ್ ಬಿ. ಶೆಟ್ಟಿ, ಶೈಲಾ ತುಂಬೆ ಉಪಸ್ಥಿತರಿದ್ದರು.
Kshetra Samachara
10/02/2021 04:06 pm