ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಿಲ್ಪಾಡಿ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರಿಗೆ ಬಹುಮತವಿದ್ದರೂ ಕಾಂಗ್ರೆಸ್ ಗೆ ಪಟ್ಟ!

ಮುಲ್ಕಿ: ಮುಲ್ಕಿ ಬಳಿಯ ಕಿಲ್ಪಾಡಿ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರಿಗೆ ಬಹುಮತವಿದ್ದರೂ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೆ ಏರುವಲ್ಲಿ ಸಫಲವಾಗಿದ್ದು, ಬಿಜೆಪಿ ಬೆಂಬಲಿತರಿಗೆ ಶಾಕ್ ನೀಡಿದ್ದಾರೆ.

ಕಿಲ್ಪಾಡಿ ಪಂ. ಅಧ್ಯಕ್ಷರಾಗಿ ಲೀಲಾವತಿ ಜಿ. ಕುಂದರ್ ಹಾಗೂ ಉಪಾಧ್ಯಕ್ಷರಾಗಿ ಗೋಪಿನಾಥ ಪಡಂಗ ಆಯ್ಕೆಯಾಗಿದ್ದಾರೆ. ಕಳೆದ ಕಿಲ್ಪಾಡಿ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 9 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು ಆರು ಸ್ಥಾನಗಳನ್ನು ಗಳಿಸಿದ್ದರೆ ಕಾಂಗ್ರೆಸ್ ಬೆಂಬಲಿತರು ಕೇವಲ ಮೂರು ಸ್ಥಾನಗಳಲ್ಲಿ ಜಯ ಗಳಿಸಿದ್ದರು.

ಅಧ್ಯಕ್ಷ ಪಟ್ಟ ತನಗೆಂದು ಗೆದ್ದು ಬೀಗುತ್ತಿದ್ದ ಬಿಜೆಪಿ ಬೆಂಬಲಿತರಿಗೆ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಕ್ ನೀಡಿದ್ದಾರೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಿಂದ ಅಧ್ಯಕ್ಷ ಸ್ಥಾನಕ್ಕೆ ಸರಕಾರದ ಮಹಿಳಾ ಮೀಸಲಾತಿ ಅನ್ವಯ ದಮಯಂತಿ ಶೆಟ್ಟಿಗಾರ್ ,ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಲೀಲಾವತಿ ಜಿ. ಕುಂದರ್ ನಾಮಪತ್ರ ಸಲ್ಲಿಸಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೋಪಿನಾಥ ಪಡಂಗ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಿಕಾಸ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಗಳಿಗೆ ನಡೆದ ಚುನಾವಣೆಯ ನಾಟಕೀಯ ಬೆಳವಣಿಗೆಯಲ್ಲಿ ಫಲಿತಾಂಶ ಘೋಷಣೆಯಾದಾಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ 5- 4 ಅಂತರದಿಂದ ಕಾಂಗ್ರೆಸ್ ಪಾಲಾಗಿದೆ.

ಈ ಮಧ್ಯೆ ಫಲಿತಾಂಶದಲ್ಲಿ ಏರುಪೇರಾಗಿರುವುದನ್ನು ಗಮನಿಸಿದ ಬಿಜೆಪಿ ಅಭ್ಯರ್ಥಿಗಳು, ನಾಯಕರು ಗೊಂದಲಕ್ಕೀಡಾಗಿ ಮರು ಚುನಾವಣೆ ನಡೆಸುವಂತೆ ಚುನಾವಣೆ ಅಧಿಕಾರಿಗಳನ್ನು ಒತ್ತಾಯಿಸಿದರು. ಆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಇದಕ್ಕೆ ಸಮ್ಮತಿಸದೆ ಇದ್ದಾಗ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಇನ್ನೊಂದೆಡೆ ಪಂಚಾಯಿತಿ ಆವರಣದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿ ಎರಡೂ ಪಕ್ಷದ ಬೆಂಬಲಿಗರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಚುನಾವಣೆ ಪ್ರಕ್ರಿಯೆ 2 ಗಂಟೆಗೆ ಶುರುವಾಗಿ 2.30ಕ್ಕೆ ಫಲಿತಾಂಶ ಬಂದು ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದರೂ ಫಲಿತಾಂಶ ಪ್ರಕಟಿಸದ ಚುನಾವಣೆ ಅಧಿಕಾರಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾಡ್ ಚುನಾವಣೆ ಫಲಿತಾಂಶ ಕೂಡಲೇ ಘೋಷಿಸುವಂತೆ ಹಾಗೂ ಅಧಿಕಾರಕ್ಕಾಗಿ ಪ್ರಭಾವ ಬೀರುವವರ ವಿರುದ್ಧ ಧಿಕ್ಕಾರ ಕೂಗಿದರು.

ಆಗ ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆ ಮುಲ್ಕಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದರು. ಒಂದೆಡೆ ಕಾಂಗ್ರೆಸ್ ಬೆಂಬಲಿಗರ ಧಿಕ್ಕಾರದ ಘೋಷಣೆ ಮೊಳಗುತ್ತಿದ್ದಂತೆ ಎಚ್ಚೆತ್ತ ಚುನಾವಣೆ ಅಧಿಕಾರಿಗಳು ಫಲಿತಾಂಶ ಘೋಷಿಸಿದರು. ಈ ಸಂದರ್ಭ ಕಾಂಗ್ರೆಸ್ ಬೆಂಬಲಿಗರಿಂದ ವಿಜಯೋತ್ಸವ ನಡೆಯಿತು.

Edited By : Manjunath H D
Kshetra Samachara

Kshetra Samachara

08/02/2021 09:10 pm

Cinque Terre

26.24 K

Cinque Terre

4

ಸಂಬಂಧಿತ ಸುದ್ದಿ