ಮೂಡುಬಿದಿರೆ: ವಾಲ್ಪಾಡಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ನಾನು ಪ್ರಮಾದವಶಾತ್ ಹೇಳಿಕೆ ನೀಡಿರುವುದು ಹಾಗೂ ತದನಂತರದ ಬೆಳವಣಿಗಳಿಂದ ಬಿಲ್ಲವ ಸಮುದಾಯದವರ ಸಹಿತ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾತಿನ ಮಧ್ಯೆ ನನ್ನಿಂದ ತಪ್ಪಾಗಿದೆ. ಆದರೆ, ಉದ್ದೇಶಪೂರ್ವಕವಾಗಿ ನಾನು ಈ ರೀತಿ ಹೇಳಿದ್ದಲ್ಲ. ಬಿಲ್ಲವ ಸಮಾಜದವರು ಸದಾ ನನ್ನ ಜೊತೆ ಇರುವವರು, ನಾನು ಅವರ ಜೊತೆ ಇರುವವನು. ತಪ್ಪು ಎಲ್ಲರಿಂದಲೂ ಆಗುತ್ತದೆ. ಅದಕ್ಕೆ ಕ್ಷಮೆಯೂ ಇದೆ. ಆದರೆ, ಕೆಲವು ಟ್ರೋಲ್ ಪೇಜ್‍ಗಳು ನನ್ನ ಬಗ್ಗೆ ಕೀಳಾಗಿ ಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ಸೈಬರ್ ಕ್ರೈಮ್ ಗೆ ದೂರು ನೀಡುತ್ತೇನೆ. ಬಿಲ್ಲವ ಸಂಘದವರು ದೂರು ನೀಡಿರುವುದು ಸರಿ. ಪೊಲೀಸ್ ತನಿಖೆಗೂ ನಾನು ಸಿದ್ಧನಿದ್ದೇನೆ ಎಂದರು.
ನನ್ನ ನೇತೃತ್ವದಲ್ಲಿ ನಡೆಯುವ ಕೆಲ್ಲಪುತ್ತಿಗೆ ಭೂತರಾಜ ಗುಡ್ಡೆಯಲ್ಲಿ ಕೋಟಿ- ಚೆನ್ನಯರನ್ನು ನಾನು ಕೂಡ ಆರಾಧಿಸುತ್ತ ಬಂದಿರುವವನು. ಕೋಟಿ- ಚೆನ್ನಯರ ಬಗ್ಗೆ ನನ್ನ ಹೇಳಿಕೆಗೆ ಪ್ರಾಯಶ್ಚಿತವಾಗಿ ನಾನು ಸಂಕ್ರಾತಿಯಂದು ಪ್ರಾರ್ಥನೆ ಸಲ್ಲಿಸಿ, ತಪ್ಪು ಕಾಣಿಕೆ ಹಾಕುತ್ತೇನೆ. ನನ್ನ ಒಡನಾಡಿ, ಗುರುಗಳಾದ ಜನಾರ್ದನ ಪೂಜಾರಿ ಅವರ ಮನೆಗೆ ಶುಕ್ರವಾರ ಹೋಗಿ ನಾನು ಅವರ ಕುಟುಂಬದವರ ಜೊತೆ ಮಾತನಾಡಿದ್ದೇನೆ ಎಂದರು.
ಒಂದು ವೇಳೆ ನನ್ನ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾದಲ್ಲಿ ನಾನು ತಟಸ್ಥನಾಗಿ, ರಾಜಕೀಯದಿಂದ ನಿವೃತ್ತಿಯಾಗಲು ಕೂಡ ಸಿದ್ಧ. ಮುಂದುವರಿದರೆ ನಾನು ನಮ್ಮ ಧರ್ಮದಲ್ಲಿರುವ ಸಲ್ಲೇಖನ ವ್ರತದ ಮುಖೇನ ದೇಹ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಜಗದೀಶ್ ಅಧಿಕಾರಿ ಭಾವುಕ ಹೇಳಿಕೆ ನೀಡಿದ್ದಾರೆ.
Kshetra Samachara
06/02/2021 04:24 pm