ಮುಲ್ಕಿ: ಬಿಲ್ಲವರ ನಾಯಕ, ಹಿರಿಯ ರಾಜಕೀಯ ಮುತ್ಸದ್ಧಿ ಜನಾರ್ದನ ಪೂಜಾರಿ ಹಾಗೂ ತುಳುನಾಡಿನ ಆರಾಧ್ಯ ಪುರುಷರಾದ ಕೋಟಿ-ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಜಗದೀಶ ಅಧಿಕಾರಿ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಅವರ ವಿರುದ್ಧ ಮುಲ್ಕಿ-ಮೂಡಬಿದ್ರೆ ಕ್ಷೇತ್ರಾದ್ಯಂತ ರಾಜಕೀಯ ರಹಿತವಾಗಿ ಪ್ರತಿಭಟನೆ ನಡೆಸುವುದಲ್ಲದೆ, ಜಗದೀಶ ಅಧಿಕಾರಿ ಮುಖಕ್ಕೆ ಮಸಿ ಬಳಿಯಲಾಗುವುದು ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಎಚ್ಚರಿಕೆ ನೀಡಿದ್ದಾರೆ.
ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಳೆಯಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದು, ಜಗದೀಶ ಅಧಿಕಾರಿ ತಮ್ಮ ಘನತೆ ಮೀರಿ ವರ್ತಿಸುತ್ತಿದ್ದಾರೆ. ಶ್ರೇಷ್ಠ ರಾಜಕಾರಣಿ ಜನಾರ್ದನ ಪೂಜಾರಿ ಹಾಗೂ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರ ಬಗ್ಗೆ ಹೀನಾಯವಾಗಿ ಮಾತನಾಡುತ್ತಿದ್ದರೂ ಅವರ ಪಕ್ಷದವರೇ ಆದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ರಂತಹ ಘಟಾನುಘಟಿಗಳು ಮೌನವಾಗಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಅವರು, ಬಿಜೆಪಿಯವರದು ನಕಲಿ ಹಿಂದುತ್ವ ಹಾಗೂ ಚುನಾವಣೆ ಬರುವಾಗ ಮಾತ್ರ ಹಿಂದುತ್ವ ನೆನಪಾಗುತ್ತದೆ ಎಂದು ವ್ಯಂಗ್ಯವಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಬಿಲ್ಲವರ ಶಾಸಕರಾಗಿದ್ದುಕೊಂಡು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಯಾರದೋ ಕುಮ್ಮಕ್ಕಿನಿಂದ ಜಗದೀಶ ಅಧಿಕಾರಿ ಮಾನಸಿಕ ಸ್ತೀಮಿತ ಕಳೆದುಕೊಂಡು ಹೇಳಿಕೆ ನೀಡುತ್ತಿದ್ದು, ಕೂಡಲೇ ಅವರು ತನ್ನ ಹೇಳಿಕೆ ಹಿಂಪಡೆದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೊಲೀಸ್ ದೂರು ನೀಡುವುದರ ಜೊತೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಪಂ ಸದಸ್ಯ ಪ್ರಮೋದ್ ಕುಮಾರ್, ಮುಲ್ಕಿ-ಮೂಡಬಿದ್ರೆ ಇಂಟಕ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಶಿಮಂತೂರು, ಯುವ ಇಂಟಕ್ ಜಿಲ್ಲಾಧ್ಯಕ್ಷ ಚಿರಂಜೀವಿ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/02/2021 06:33 pm