ಮಂಗಳೂರು: ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಕೂಗು ಸಾಕಷ್ಟು ಕೇಳಿ ಬರುತ್ತಿದ್ದು, ಒಂದಷ್ಟು ಕಾನೂನಿನ ತೊಡಕನಿಂದ ಈ ಕಾರ್ಯಕ್ಕೆ ತಡೆಯಾಗುತ್ತಿದೆ. ಇದರ ಜೊತೆಗೆ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಬೇಕೆಂಬ ಒತ್ತಾಯವೂ ಹತ್ತಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೂ ಜನಪ್ರತಿನಿಧಿಗಳ ಹಿತಾಸಕ್ತಿಯ ಕೊರತೆಯಿಂದಲೋ, ಉದಾಸೀನತೆಯಿಂದಲೋ ಈ ಎರಡೂ ಕಾರ್ಯಗಳು ಅನುಷ್ಠಾಗೊಳ್ಳದೆ ನನೆಗುದಿಗೆ ಬಿದ್ದಿದೆ. ಈ ನಡುವೆ ಜನರೇ ಸ್ವಯಂ ತುಳುಭಾಷೆ, ತುಳುಲಿಪಿಯ ಬಗ್ಗೆ ಜಾಗೃತರಾಗುವ ಮೂಲಕ ಕರಾವಳಿಯಲ್ಲಿ ಎಲ್ಲೆಲ್ಲೂ ತುಳುಲಿಪಿಯ ಟ್ರೆಂಡ್ ಆರಂಭವಾಗಿದೆ.
ಸಾವಿರಾರು ವರ್ಷಗಳ ಇತಿಹಾಸವಿದ್ದರೂ, ತುಳುಲಿಪಿಯು ಒಂದಷ್ಟು ಸಮಸ್ಯೆಗಳಿಂದ ನನೆಗುದಿಗೆ ಬಿದ್ದಿತ್ತು. ಆದರೆ ಖ್ಯಾತ ವಿದ್ವಾಂಸ ವೆಂಕಟರಾಜ ಪುಣಿಂಚಿತ್ತಾಯರ ಶೋಧನೆಯ ಫಲವಾಗಿ ಮತ್ತೆ ಬೆಳಕಿಗೆ ಬಂದ ತುಳು ಲಿಪಿಯು ಇದೀಗ ಮತ್ತೆ ಮೇಲ್ಪಂಕ್ತಿ ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಯುವ ಸಮೂಹ ತುಳುಲಿಪಿಯನ್ನು ಎಲ್ಲ ಕಡೆಗಳಲ್ಲಿ ಬಳಸಲು ಆರಂಭಿಸಿದ್ದಾರೆ. ಕರಾವಳಿಯ ಎಲ್ಲಾ ಅಂಗಡಿಗಳು, ಹೊಟೇಲ್, ಬೇಕರಿ, ಬರ್ತ್ ಡೇ ಕೇಕ್, ಮದುವೆ ಸಮಾರಂಭದಲ್ಲಿ ವಧೂ - ವರರ ಹೆಸರುಗಳಲ್ಲಿ, ಮನೆಯ ಹೆಸರುಗಳಲ್ಲಿ ತುಳು ಲಿಪಿಯನ್ನು ಬಳಸುವ ಟ್ರೆಂಡ್ ಆರಂಭವಾಗಿದೆ. ಅಲ್ಲದೇ, ಉಡುಪಿ ಕೃಷ್ಣ ಮಠ ಸೇರಿದಂತೆ ಕೆಲವೊಂದು ದೇಗುಲಗಳಲ್ಲಿ ತುಳು ನಾಮಫಲಕಗಳನ್ನು ಅಳವಡಿಸಿರುವುದನ್ನು ಕಾಣಬಹುದು.
ಸಸಿಹಿತ್ಲು ಶ್ರೀ ಭಗವತಿ ಯಕ್ಷಗಾನ ಮೇಳದ ಪರದೆಯಲ್ಲಿಯೂ ತುಳುಲಿಪಿಯನ್ನು ಬಳಸಲಾಗಿದೆ. ಕೆಲವೊಂದು ಸಂಘಟನೆಗಳು ತಮ್ಮ ಟೀ ಶರ್ಟ್ಗಳಲ್ಲಿಯೂ ತುಳುಲಿಪಿ ಅಳವಡಿಸಿಕೊಂಡಿವೆ. ದ.ಕ.ಜಿಲ್ಲೆಯ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಅವರು, ತಮ್ಮ ಒಂದು ಬಸ್ನಲ್ಲಿ ತುಳುಲಿಪಿ ಬರೆಯಿಸಿರುವ ಮೂಲಕ ತುಳುಲಿಪಿಯ ಬಗೆಗಿನ ತಮ್ಮ ಒಲವನ್ನು ತೋರಿಸಿದ್ದಾರೆ.
'ಜೈ ತುಳುನಾಡು ಸಂಘಟನೆ', 'ಯುವ ತುಳುನಾಡು ® ಕುಡ್ಲ' ಮುಂತಾದ ಉತ್ಸಾಹಿ ಯುವಕರ ತಂಡಗಳು ತುಳುಲಿಪಿಯ, ತುಳುಭಾಷೆಯ ಉನ್ನತಿಗಾಗಿ ಸದ್ದಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುತ್ತಿವೆ. ಜೈ ತುಳುನಾಡು ಸಂಘಟನೆಯು ಆನ್ಲೈನ್ ಮುಖಾಂತರ ಆಸಕ್ತರಿಗೆ ಉಚಿತವಾಗಿ ತುಳುಲಿಪಿ ಕಲಿಸುತ್ತಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಈ ಸಂಘಟನೆ ಸಾವಿರಾರು ಮಂದಿಗೆ ತುಳುಲಿಪಿಯಲ್ಲಿ ಬರೆಯಲು, ಓದಲು ಕಲಿಸಿದೆ. ಅದೇ ರೀತಿ ಸಾಕಷ್ಟು ದೇಗುಲಗಳಿಗೆ, ಊರುಗಳಿಗೆ, ಬಸ್ ತಂಗುದಾಣಗಳಿಗೆ ತುಳು ನಾಮಫಲಕಗಳ ಅಳವಡಿಕೆಯ ಹಿಂದೆ ಜೈ ತುಳುನಾಡು ಸಂಘಟನೆಯ ಶ್ರಮ ಬಹಳಷ್ಟಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೂ ಇದೇ ಜೈ ತುಳುನಾಡು ಸಂಘಟನೆ ತುಳುನಾಮಫಲಕ ನೀಡಿದ್ದು, ಇದೀಗ ಅವರು ತಮ್ಮ ಕಚೇರಿಯಲ್ಲಿ ತುಳುಲಿಪಿಯ ನಾಮಫಲಕವನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ಮಂಗಳೂರು ಮನಪಾದಲ್ಲಿಯೂ ತುಳುನಾಮಫಲಕ ಅಳವಡಿಸಬೇಕೆಂದು ಈ ಸಂಘಟನೆ ಮನವಿ ನೀಡಿದೆ.
ಅದೇ ರೀತಿ 'ಯುವ ತುಳುನಾಡು ® ಕುಡ್ಲ' ಸಂಘಟನೆಯೂ ತುಳುಲಿಪಿಯ ಬಗ್ಗೆ ಒಲವು ತೋರುತ್ತಿದ್ದು, ಇತ್ತೀಚಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಉಪ ಪೊಲೀಸ್ ಆಯುಕ್ತರಿಗೆ ತುಳು ನಾಮಫಲಕವನ್ನು ನೀಡಿದೆ. ತುಳುವರಲ್ಲದಿದ್ದರೂ ಈ ಇಬ್ಬರೂ ತಮ್ಮ ಕಚೇರಿಯಲ್ಲಿ ಇದೇ ನಾಮಫಲಕವನ್ನು ಅಳವಡಿಸಿ, ತುಳುಭಾಷಾ ಪ್ರೇಮ ಮೆರೆದಿದ್ದಾರೆ.
ತುಳು ಸಂಘಟನೆಗಳು, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರ ಒತ್ತಾಯದ ಮೇರೆಗೆ ಸಿಎಂ ಯಡಿಯೂರಪ್ಪನವರು ತುಳುಭಾಷೆಯನ್ನು ರಾಜ್ಯಭಾಷೆಯಾಗಿ ಅಂಗೀಕರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಕ್ರೋಢೀಕರಿಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಇತ್ತೀಚೆಗೆ ಭರವಸೆ ನೀಡಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ತುಳು ಲಿಪಿಯಲ್ಲಿ ಆದ ಸಂಚಲನ ತುಳುಭಾಷೆಯನ್ನು ಅಧಿಕೃತ ರಾಜ್ಯಭಾಷೆಯಾಗಲು ಪೂರಕವಾಗಿ ಸಹಕಾರಿಯಾಗುವುದೇ ಎಂದು ಕಾದು ನೋಡಬೇಕಿದೆ.
Kshetra Samachara
02/02/2021 01:44 pm