ಮುಲ್ಕಿ: ಮುಲ್ಕಿಯ ಕೆರೆಕಾಡು ಅಂಬೇಡ್ಕರ್ ಯುವ ಸೇನೆ ಗ್ರಾಮ ಶಾಖೆ ನೇತೃತ್ವದಲ್ಲಿ ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ದಲಿತ ಮೀನು ಮಾರಾಟಗಾರ ಮಹಿಳೆಯ ಮೇಲೆ ನಡೆದ ದೌರ್ಜನ್ಯ ಪ್ರಕರಣದ ಬಗ್ಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದು ಪೊಲೀಸರ ಕರ್ತವ್ಯಲೋಪದ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯ ಬಳಿ ಬ್ರಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮೊದಲಿಗೆ ಮೀನು ಮಾರಾಟಗಾರ ರಾದ ಶಾರದಾ, ಸುನಂದ, ಗುಲಾಬಿ ತಮಗೆ ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ಆದ ದೌರ್ಜನ್ಯದ ಬಗ್ಗೆ ವಿವರಿಸಿ ಸೂಕ್ತ ನ್ಯಾಯ ದೊರಕಿಸಲು ವಿಫಲವಾದ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘಟನೆಯ ನಾಯಕ ಲೋಕೇಶ್ ಕಂಚಿನಡ್ಕ ಮಾತನಾಡಿ ಕಿನ್ನಿಗೋಳಿ ದಲಿತ ಮೀನು ಮಾರಾಟಗಾರರ ಮೇಲೆ ನಡೆಸಿದ ದೌರ್ಜನ್ಯ ಬಗ್ಗೆ ಪ್ರಸ್ತಾಪಿಸಿ ಪ್ರಕರಣದ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸದೆ ನಿರ್ಲಕ್ಷ್ಯವಹಿಸಿದ್ದಾರೆ.
ದೌರ್ಜನ್ಯ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ನಾವು ಹಾರೆ ಪಿಕ್ಕಾಸು ಮೂಲಕ ಬೆವರು ಸುರಿಸಿ ದುಡಿಯುತ್ತಿರುವವರು ನಮಗೇನಾದರೂ ಹಾರೆ ಪಿಕಾಸಿ ನಿಂದಲೇ ಉತ್ತರ ನೀಡುತ್ತೇವೆ ಎಂದು ಆಕ್ರೋಶಭರಿತರಾಗಿ ಹೇಳಿದರು. ದಲಿತ ಸಂಘಟನೆಯ ಜಯನ್ ಮಲ್ಪೆ ಮಾತನಾಡಿ ಸಂವಿಧಾನವನ್ನು ಗೌರವಿಸಬೇಕಾದ ಪೊಲೀಸರು ಬೇರೆಯವರ ಮಾತು ಕೇಳಿ ದಲಿತ ದೌರ್ಜನ್ಯ ನಡೆಸಿದ್ದಾರೆ. ರಾಜಕೀಯ ಷಡ್ಯಂತ್ರ ನಡೆಸಿ ದಲಿತ ಮೀನು ಮಾರಾಟಗಾರರನ್ನು ಮಾರುಕಟ್ಟೆಯಿಂದಲೇ ಹೊಡೆದೋಡಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಪೊಲೀಸರಿಂದಲೇ ಹಿಂದುತ್ವ ಹಾಗೂ ದಲಿತತ್ವ ನಡುವೆಭಿನ್ನಾಭಿಪ್ರಾಯ ನಡೆಯುತ್ತಿದೆ ಎಂದು ಆರೋಪಿಸಿ ಸೂಕ್ತ ನ್ಯಾಯ ನೀಡುವಂತೆ ಒತ್ತಾಯಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಕೃಷ್ಣಪ್ಪ ಸ್ಥಾಪಿತ) ಶೇಖರ ಹೆಜ್ಮಾಡಿ ಮಾತನಾಡಿ ಮುಲ್ಕಿ ಪೊಲೀಸರು ನರಸತ್ತ ಶಾಸಕರ ಕೈಗೊಂಬೆಯಾಗಿದ್ದು ದಲಿತ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತು ಪಡಿಸಬೇಕು ಇಲ್ಲದಿದ್ದರೆ ರಾಜ್ಯದ 30 ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ಬಳಿಕ ಮಂಗಳೂರು ಡಿಸಿಪಿ ಹರಿರಾಮ್ ಮುಖಾಂತರ ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ದಲಿತ ಮಹಿಳೆಗೆ ಆದ ದೌರ್ಜನ್ಯದ ದ ಮರು ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಬೇಕು ಹಾಗೂ
ಮುಂದಕ್ಕೆ ಇಂಥ ಪ್ರಕರಣಗಳು ನಡೆದಲ್ಲಿ ಮೀನಾಮೇಷ ಎಣಿಸದೆ ಆರೋಪಿಗಳನ್ನು 24ಗಂಟೆಯೊಳಗೆ ಬಂಧಿಸಬೇಕೆಂದು ದಲಿತ ಮಹಿಳಾ ಮೀನುಗಾರ್ತಿ ಶಾರದಾ ಮಲ್ಪೆ ಯವರು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಹರಿರಾಮ್ ಮಾತನಾಡಿ "ದಲಿತರ ನೋವು ನನಗೆ ಅರ್ಥವಾಗುತ್ತದೆ "ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ನಾಯಕರಾದ ರಘುರಾಜ್ ಕದ್ರಿ, ಶಂಕರ್ ಮಾಸ್ಟರ್ ಗೋಳಿಜೋರ, ವಕೀಲ ರಾಜೇಶ್ ಪಡುಬಿದ್ರೆ ಚಂದ್ರಶೇಖರ ಗೋಳಿಜೋರ, ಸಂತೋಷ್ ಕುಮಾರ್ ಕಿನ್ನಿಗೋಳಿ, ಸುಧಾಕರ ಅಮೃತಾನಂದಮಯಿ ನಗರ, ಶ್ರೀಪತಿ ಕೆರೆಕಾಡು, ಪಲ್ಲವಿ ಮುಲ್ಕಿ, ಉಮೇಶ್ ಕೆರೆಕಾಡು, ಹರೀಶ್ ಪಡುಬಿದ್ರೆ, ಸುಂದರ ಕಪ್ಪೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನೆಯ ಮೊದಲು ಮುಲ್ಕಿ ಬಸ್ಸು ನಿಲ್ದಾಣದಿಂದ ಮುಲ್ಕಿ ಪೊಲೀಸ್ ಠಾಣೆಯ ವರೆಗೆ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆಯ ಜಾಥಾ ನಡೆದು "ದಲಿತ ದೌರ್ಜನ್ಯ ನಡೆಸುತ್ತಿರುವ ಪೊಲೀಸರಿಗೆ ಧಿಕ್ಕಾರ" ಎಂದು ಕೂಗಿದರು. ಅಹಿತಕರ ಘಟನೆಗಳು ನಡೆಯದಂತೆ ಮುಲ್ಕಿ ಸರ್ಕಲ್ ಇನ್ಸ್ಪೆಕ್ಟರ್ ಕುಸುಮಾಧರ ವಿಶೇಷ ಬಂದೋಬಸ್ತ್ ನಡೆಸಿದ್ದರು.
Kshetra Samachara
26/01/2021 03:41 pm