ಬಂಟ್ವಾಳ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಹಲವು ಅವ್ಯವಸ್ಥೆಗಳಿಗೆ ಕಾರಣವಾಗಿದ್ದರೆ, ಇಡೀ ಪ್ರಕ್ರಿಯೆಯೇ ಗೊಂದಲಮಯವಾಗಿತ್ತು ಎಂದು ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯಿತಿ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಅಕ್ಷರ ದಾಸೋಹ ಸಿಬ್ಬಂದಿ ಯಾರಾದರೂ ಚುನಾವಣೆಗೆ ನಿಂತು ಗೆದ್ದಿದ್ದರೆ, ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಕುರಿತು ಸರ್ಕಾರದ ಸುತ್ತೋಲೆ ಬಂದಿದೆ ಎಂದರು. ಇದಕ್ಕೆ ಆಕ್ಷೇಪ ಸಲ್ಲಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್, ಅಕ್ಷರ ದಾಸೋಹ ಕೆಲಸ ಮಾಡುವುದು ಲಾಭದಾಯಕ ಹುದ್ದೆ ಅಲ್ಲ. ಚುನಾವಣೆಗೆ ನಿಲ್ಲುವ ವೇಳೆ ಇಂಥದ್ದೊಂದು ನಿಯಮವನ್ನು ತಿಳಿಸದೆ ಗೆದ್ದ ಮೇಲೆ ಈ ರೀತಿ ಮಾಡುವುದು ಸರಿಯಲ್ಲ ಎಂದರು ಸದಸ್ಯರಾದ ರಮೇಶ್ ಕುಡ್ಮೇರು, ಯಶವಂತ ಪೊಳಲಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರೂ ದನಿಗೂಡಿಸಿದರು. ಇದೇ ವೇಳೆ ಚುನಾವಣಾ ಪ್ರಕ್ರಿಯೆಯೇ ಗೊಂದಲದ ಗೂಡಾಗಿರುವ ಕುರಿತು ಸದಸ್ಯರು ಪಕ್ಷಬೇಧ ಮರೆತು ದೂರಿದರು. ವಿಷಯ ಪ್ರಸ್ತಾಪಿಸಿದ ತಾಪಂ ಸದಸ್ಯ ಹೈದರ್ ಕೈರಂಗಳ, ಮತದಾನ ಪ್ರಕ್ರಿಯೆಯಿಂದ ಮತ ಎಣಿಕೆಯ ವಿಚಾರಗಳನ್ನು ಎಳೆಎಳೆಯಾಗಿ ವಿವರಿಸಿದರು ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಅಧಿಕಾರಿಗಳ ಬಳಿಯೂ ಸಮರ್ಪಕ ಮಾಹಿತಿ ಇರಲಿಲ್ಲ. ದಿನಕ್ಕೊಂದು ಸೂಚನೆಗಳನ್ನು ನೀಡುವ ಮೂಲಕ ಗೊಂದಲವನ್ನು ನಿರ್ಮಿಸಿದರು. ಮುಂದಿನ ಚುನಾವಣೆ ವೇಳೆ ಇದು ಪುನಾವರ್ತನೆ ಆಗದಿರಲಿ ಎಂದರು. ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ಮತ ಎಣಿಕೆಯ ಸಂದರ್ಭ ಪ್ರತಿಯೊಂದು ಪಂಚಾಯಿತಿ ಬೂತ್ ಗಳನ್ನು ಸರಿಯಾಗಿ ಗುರುತುಪಡಿಸಿ ವೇಗದ ಎಣಿಕೆಗೆ ವ್ಯವಸ್ಥೆಯನ್ನು ಕಲ್ಪಿಸಬಹುದಿತ್ತು ಎಂದರು.
Kshetra Samachara
07/01/2021 07:06 pm