ಮಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶಕ್ಕೆ ರಾಜ್ಯಪಾಲರ ಅನುಮತಿ ದೊರಕಿದ್ದು, ನಿನ್ನೆ ಮಧ್ಯರಾತ್ರಿಯಿಂದಲೇ ಕಾನೂನು ಜಾರಿಯಾಗಿದೆ. ದ.ಕ.ಜಿಲ್ಲೆಯಲ್ಲಿಯೂ ಅಕ್ರಮ ಜಾನುವಾರು ಸಾಗಾಟದಾರರ ಮೇಲೆ ಇದೇ ಕಾನೂನಿನಡಿಯಲ್ಲಿ ಪ್ರಕರಣ ದಾಖಲಾಗಲಿ ಎಂದು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ವಿನಯ್ ಎಲ್. ಶೆಟ್ಟಿ ಮನಪಾ ಆಯುಕ್ತರು ಹಾಗೂ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ವತಿಯಿಂದ ಈಗಾಗಲೇ ಇದಕ್ಕೆ ಬೇಕಾಗಿರುವ ನಿಯಮಗಳನ್ನು ಸರಕಾರಕ್ಕೆ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಈ ಕಾನೂನಿಗೆ ಬೇಕಾಗುವ ನಿಯಮಗಳನ್ನು ತರಲಾಗುತ್ತದೆ ಎಂದು ಹೇಳಿದರು.
ಹಿಂದಿನ ಸರಕಾರ ಜಾನುವಾರು ಹತ್ಯೆ ಕಾನೂನನ್ನು ಹಿಂಪಡೆದಿದ್ದು, ಇದೀಗ ಮತ್ತೆ ಯಡಿಯೂರಪ್ಪ ಸರಕಾರ ಹಳೆಯ ಕಾನೂನಿಗೆ ಹೊಸದಾಗಿ ತಿದ್ದುಪಡಿ ಮಾಡಿ ಮತ್ತೆ ಬಲಪಡಿಸಿ ಸದೃಢವಾದ ಕಾನೂನನ್ನು ಜಾರಿಗೊಳಿಸಲಾಗಿದೆ. ಈ ಕಾನೂನಿಗೆ ವಿಧಾನಸಭೆಯಲ್ಲಿ ಅನುಮತಿ ದೊರಕಿದ್ದು, ವಿಧಾನ ಪರಿಷತ್ ನಲ್ಲಿ ಅನುಮತಿ ದೊರಕದ ಕಾರಣ ಆಧ್ಯಾದೇಶದ ಮೂಲಕ ಜಾರಿಗೆ ತರುವ ಭರವಸೆಯಂತೆ ನಿನ್ನೆ ಮಧ್ಯರಾತ್ರಿಯಿಂದ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದರು.
Kshetra Samachara
06/01/2021 05:44 pm