ಮಂಗಳೂರು: ಎಸ್ ಡಿಪಿಐ ಪಕ್ಷವು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್ ಡಿಪಿಐ ಯಾರ ಜೊತೆಗೆ ನಿಂತು ಕೆಲಸ ಮಾಡುತ್ತಿದೆ ಎಂದು ಜನರಿಗೆ ಅರಿವು ಇದೆ.
ಕಾಂಗ್ರೆಸ್ ಜಾತ್ಯತೀತ ನಿಲುವು ಹೊಂದಿರುವ ಪಕ್ಷವಾಗಿದ್ದು, ಸರ್ವ ಧರ್ಮಗಳನ್ನು ಸರಿ ಸಮಾನವಾಗಿ ಕಾಣುತ್ತಿದೆ. ಆದ್ದರಿಂದ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಗಳಿಸಿ ವಿಜಯ ಸಾಧಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಸೌಹಾರ್ದತೆಯಿಂದ ಇರುವ ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕಾರ್ಯ ನಡೆಯುತ್ತಿವೆ. ಇತ್ತೀಚೆಗೆ ಮೂರು ದೈವಸ್ಥಾನಗಳಲ್ಲಿ ಒಂದು ಧರ್ಮದ ಭಾವನೆಗಳಿಗೆ ನೋವಾಗುವ ರೀತಿಯಲ್ಲಿ ನೋಟ್ ನಲ್ಲಿ ಬರೆದುದಲ್ಲದೆ, ಕಾಂಡೋಮ್ ಗಳನ್ನೂ ಕಾಣಿಕೆ ಹುಂಡಿಯಲ್ಲಿ ಹಾಕಿರುವ ಕುಕೃತ್ಯ ನಡೆದಿದೆ.
ಇದು ಅಕ್ಷಮ್ಯ ಅಪರಾಧ. ಇಂತಹ ಕುಕಾರ್ಯಗಳ ಮೂಲಕ ದ.ಕ. ಜಿಲ್ಲೆಗೆ ಕಪ್ಪುಚುಕ್ಕೆ ತರುವ ಕೆಲಸ ನಡೆದಿದೆ. ಈ ವಿಕೃತ ಮನೋಭಾವ ಇರುವವರ ವಿರುದ್ಧ ಕಠಿಣ ಶಿಕ್ಷೆ ಆಗುವವರೆಗೆ ಹೋರಾಟ ನಡೆಸಬೇಕಾಗಿದೆ ಎಂದು ಮಿಥುನ್ ರೈ ಹೇಳಿದರು.
ಈ ಕೆಟ್ಟ ಕೆಲಸ ಮಾಡಿದವರನ್ನು ಶೀಘ್ರ ಮಂಗಳೂರು ನೂತನ ಪೊಲೀಸ್ ಆಯುಕ್ತರು ಬಂಧಿಸಿ ಸಾರ್ವಜನಿಕ ಸ್ಥಳದಲ್ಲಿ ಶಿಕ್ಷೆ ವಿಧಿಸಬೇಕು. ಅಲ್ಲದೆ, ಮನಪಾ ಆಯುಕ್ತರು ಹಾಗೂ ಮೇಯರ್ ಧಾರ್ಮಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.
Kshetra Samachara
03/01/2021 12:58 pm