ಉಪ್ಪಿನಂಗಡಿ: ಭಾರತದ ಆತ್ಮ ಇರುವುದು ಧರ್ಮದ ಆಧಾರದಲ್ಲಿ. ಆದ್ದರಿಂದ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಧಾರ್ಮಿಕ ಶಿಕ್ಷಣ ಪದ್ಧತಿಯನ್ನು ಎಲ್ಲಾ ದೇವಾಲಯಗಳಲ್ಲಿ ಅನುಷ್ಠಾನಿಸುವ ಅಗತ್ಯವಿದೆ ಎಂದು ರಾಜ್ಯ ಇಂಧನ ಖಾತೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ 5ರಿಂದ 15ರ ಹರೆಯದ ಮಕ್ಕಳಿಗೆ ಆಯೋಜಿಸಲಾದ ಧಾರ್ಮಿಕ ಶಿಕ್ಷಣ ಯೋಜನೆಯನ್ನು ಇಂದು ಸಂಜೆ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಸಮಾಜದಲ್ಲಿ ಧರ್ಮ ವಿರೋಧಿ, ಸಮಾಜ ವಿರೋಧಿ ಚಟುವಟಿಕೆ ಹೆಚ್ಚುತ್ತಿದೆ. ಆದ್ದರಿಂದ ಇದನ್ನೆಲ್ಲ ತೊಡೆದು ಹಾಕಲು ಧಾರ್ಮಿಕ ಶಿಕ್ಷಣದ ಅನುಷ್ಠಾನ ಅಗತ್ಯವಿದೆ. ಪಠ್ಯ ಶಿಕ್ಷಣದಲ್ಲಿ ಸಿಗದ ಶಿಕ್ಷಣ ಇಲ್ಲಿ ದೊರೆಯಲು ಸಾಧ್ಯ. ದೇವಾಲಯಗಳು ಕೇವಲ ಭಕ್ತಿ ಕೇಂದ್ರಗಳಾಗದೇ ಸಮಾಜಕ್ಕೆ ಶಕ್ತಿ ಕೇಂದ್ರಗಳಾಗಿ ರೂಪುಗೊಳ್ಳಬೇಕು ಎಂದರು.
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸದಸ್ಯೆ ಪ್ರೇಮಲತಾ ಕಾಂಚನ ಉಪಸ್ಥಿತರಿದ್ದರು.
Kshetra Samachara
16/05/2022 10:27 pm