ವರದಿ: ರಹೀಂ ಉಜಿರೆ
ಕೊಲ್ಲೂರು: ಮುಸಲ್ಮಾನರಿಗೆ ವ್ಯಾಪಾರ ಬಹಿಷ್ಕಾರದ ಮುಂದುವರೆದ ಭಾಗವಾಗಿ ಕೊಲ್ಲೂರಿನಲ್ಲಿ "ಸಲಾಂ ಮಂಗಳಾರತಿ" ಪೂಜೆಯನ್ನು ನಿಲ್ಲಿಸಬೇಕು ಎಂಬ ಹೊಸ ಕೂಗು ಕೇಳಿ ಬಂದಿದೆ!
ಹೌದು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಮು ಸಾಮರಸ್ಯ ಸಾರುತ್ತಿರುವ ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಟಿಪ್ಪು ಸುಲ್ತಾನ್ ನೆನಪಿನಲ್ಲಿ ಇಲ್ಲಿ "ಸಲಾಂ ಮಂಗಳಾರತಿ" ಎಂಬ ಪೂಜೆ ಮಾಡಲಾಗುತ್ತಿದೆ. ಟಿಪ್ಪುವಿಗೆ ಗೌರವ ನೀಡುವ ಸಲುವಾಗಿ ನಡೆಯುವ ಈ ಪೂಜೆ ಮೇಲೆ ಈಗ ಹಿಂದೂ ಸಂಘಟನೆಗಳ ಕೆಂಗಣ್ಣು ಬಿದ್ದಿದೆ!
ವಿಶ್ವ ಹಿಂದೂ ಪರಿಷತ್ ಇವತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಧಿಕಾರಿಗಳಿಗೆ ಮನವಿ ನೀಡಿ, 'ಸಲಾಂ ಮಂಗಳಾರತಿ'
ಹೆಸರನ್ನು ತೆಗೆಯಲು ಆಗ್ರಹಿಸಿದೆ. ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಈ ಒತ್ತಾಯ ಮಾಡಲಾಗಿದೆ.
ಮತಾಂಧ, ಕನ್ನಡ ಮತ್ತು ಹಿಂದೂ ವಿರೋಧಿ ಟಿಪ್ಪು ಹೆಸರಿನಲ್ಲಿ ಸಲಾಂ ಮಂಗಳಾರತಿ ನಡೆಸಬಾರದು.
ನೂರಾರು ದೇವಸ್ಥಾನಗಳನ್ನು ಟಿಪ್ಪು ಧ್ವಂಸಗೊಳಿಸಿದ್ದಾನೆ. ಹೀಗಾಗಿ
ದೇವಿ ಮೂಕಾಂಬಿಕೆಗೆ ಸಲಾಂ ಹೆಸರಿನಲ್ಲಿ ಮಂಗಳಾರತಿ ಯಾಗುತ್ತಿರುವುದು ಖೇದಕರ.
ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಆಗುತ್ತದೆ.
ಸಲಾಂ ಹೆಸರಲ್ಲಿ ಮಂಗಳಾರತಿ ಗುಲಾಮಗಿರಿಯ ಸಂಕೇತ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಳ್ಳಬೇಕು.
ಸಲಾಂ ಹೆಸರನ್ನು ತೆಗೆದು ದೇವರ ಹೆಸರಲ್ಲಿ ಮಂಗಳಾರತಿ ಮಾಡಿ ಎಂದು ವ್ಯವಸ್ಥಾಪನ ಸಮಿತಿಗೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕು.
PublicNext
26/03/2022 05:28 pm