ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಪ್ರವೀಣ್ ಅವರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಪಕ್ಕದಲ್ಲೇ ಇರುವ ಮಸೂದ್ ಮನೆಗೆ ಭೇಟಿ ನೀಡದಿರುವುದು ನಾಚಿಗೇಡಿನ ವಿಚಾರ ಎಂದು ಪುತ್ತೂರು ಜೆಡಿಎಸ್ ಆರೋಪಿಸಿದೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಅಶ್ರಫ್ ಕಲ್ಲೇಗ, ರಾಜ್ಯದ ಏಳು ಕೋಟಿ ಜನರ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರ ಈ ರೀತಿಯ ವರ್ತನೆ ಖಂಡನೀಯ ಎಂದ ಅವರು, ಬೊಮ್ಮಾಯಿ ಓರ್ವ ನಾಲಾಯಕ್ ಮುಖ್ಯಮಂತ್ರಿ ಎಂದರು. ಪ್ರವೀಣ್ ಮನೆಗೆ ಬಂದು ಸರಕಾರದ ವತಿಯಿಂದ ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ ವಿಷಯವಾದರೂ, ಅದೇ ರೀತಿ ಮಸೂದ್ ಕುಟುಂಬಕ್ಕೂ ಪರಿಹಾರ ನೀಡಬೇಕಿತ್ತು.ರಾಜ್ಯದ ಎಲ್ಲಾ ಸಮುದಾಯದ ಕಟ್ಟಿದ ತೆರಿಗೆಯ ಹಣವನ್ನು ಕೇವಲ ಪ್ರವೀಣ್ ಕುಟುಂಬಕ್ಕೆ ಮಾತ್ರ ನೀಡಿದ್ದು ಸರಿಯಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡರಾದ ಹೆಚ್.ಡಿ.ಕುಮಾರಸ್ವಾಮಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಹತ್ಯೆಯಾದ ಎಲ್ಲರ ಮನೆಗೂ ಭೇಟಿ ನೀಡಿ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿ ಆದರ್ಶ ಮೆರೆದಿದ್ದಾರೆ ಎಂದರು.
Kshetra Samachara
01/08/2022 03:56 pm