ಜೂನ್ 16 ರಂದು ʼಸಂಡೆ ಅಂಕಲ್ಸ್ ಆರ್ ಮಂಡೇ ಸನ್ಸ್ʼ ಎಂಬ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಐಟಿ ಸೆಲ್ ನ ಕಾರ್ಯದರ್ಶಿ ಶೈಲಜಾ ಅಮರನಾಥ್, ಶ್ರೀರಾಮ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಶೈಲಜಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಲಬ್ ಹೌಸ್ ನಲ್ಲಿ ನಡೆದ ಕೆಲವು ಚರ್ಚೆ ಸಂದರ್ಭ ಕೆಲವು ಹೇಳಿಕೆಗಳನ್ನು ನೀಡಿದ್ದು, ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆ ತಿರುಚಿ ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಸರಕಾರ ಈ ರೀತಿಯ ಕೃತ್ಯ ನಡೆಸುತ್ತಿದೆ ಎಂದು ಆರೋಪಿಸಿದ ಶೈಲಜಾ, ಬಿಜೆಪಿಯ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಎಡಿಟ್ ಮಾಡಿದ ಆಡಿಯೋವನ್ನು ಪ್ರಸಾರ ಮಾಡಿ ತನ್ನ ತೇಜೋವಧೆ ಹಾಗೂ ತನ್ನ ಮೇಲೆ ಹಲ್ಲೆಗೆ ಪ್ರಚೋದಿಸಲಾಗುತ್ತಿದೆ. ಇದೇ ಕಾರಣಕ್ಕಾಗಿ ಕೆಲವು ದುಷ್ಕರ್ಮಿಗಳು ಮನೆ ಮೇಲೆಯೂ ದಾಳಿ ಮಾಡಿದ್ದಾರೆ.
ಶಾಸಕ ಸಂಜೀವ ಮಠಂದೂರು ತನ್ನ ಹೇಳಿಕೆಗೆ ಹಿಂದೂಗಳ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದು, ಕ್ಷಮೆಯನ್ನು ಶಾಸಕರೇ ಕೇಳಬೇಕು. ಶಾಸಕರ ಕ್ಷೇತ್ರದ ನಿವಾಸಿಯಾಗಿರುವ ಹೆಣ್ಣುಮಗಳಿಗೆ ಸೂಕ್ತ ಭದ್ರತೆ ಒದಗಿಸದ ಶಾಸಕರು ಮೊದಲು ಕ್ಷಮೆ ಕೋರಬೇಕು. ಮುಂದಿನ 48 ಗಂಟೆಗಳಲ್ಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಬೇಕು. ಕ್ಲಬ್ ಹೌಸ್ ನಲ್ಲಿ ನಡೆದ ಅಸಲಿ ಆಡಿಯೋವನ್ನು ಪೊಲೀಸರು ಪರಿಶೀಲನೆ ನಡೆಸಬೇಕು.
ಎಡಿಟೆಡ್ ಆಡಿಯೋವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ನ ಸಿಬ್ಬಂದಿಯನ್ನು ತನಿಖೆ ನಡೆಸಬೇಕು. ಇಲ್ಲದೇ ಹೋದಲ್ಲಿ ಪೊಲೀಸ್ ಠಾಣೆ ಮುಂದೆ ʼನನ್ನನ್ನು ಅರೆಸ್ಟ್ ಮಾಡಿʼ ಎನ್ನುವ ಬೋರ್ಡ್ ಹಿಡಿದು ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
PublicNext
20/06/2022 07:02 pm