ಪಿಎಸ್ಐ ನೇಮಕಾತಿ ಹಗರಣವು ಸರಕಾರದ ಪಾಲುದಾರಿಕೆಯಿಂದಲೇ ನಡೆದಿದ್ದು, ಇದು ರಾಜ್ಯ ಸರಕಾರದ ಆಡಳಿತ ವೈಫಲ್ಯ ಎಂದು ವಿಧಾನಸಭೆಯ ವಿಪಕ್ಷ ನಾಯಕ ಯು.ಟಿ.ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿಂದು ಮಾತನಾಡಿದ ಅವರು, ಈ ವಿಚಾರದಲ್ಲಿ ಸರಕಾರ ಮೌನವಾಗಿದೆ ಎಂದು ರಾಜ್ಯದ ಜನತೆಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಹೈಕೋರ್ಟ್ ಈ ಹಗರಣದ ಹಿನ್ನೆಲೆಯಲ್ಲಿ ಸಿಒಡಿಗೆ ಚಾಟಿ ಬೀಸಿದ ಮರುದಿನ ನ್ಯಾಯಾಧೀಶರಿಗೆ ವರ್ಗಾವಣೆಯಾಗುವ ಬೆದರಿಕೆ ಬರುತ್ತದೆ. ನ್ಯಾಯಾಧೀಶರುಗಳಿಗೆ ಇಂತಹ ಪರಿಸ್ಥಿತಿ ಎದುರಾದರೆ ರಾಜ್ಯದ ಜನತೆಯ ಪರಿಸ್ಥಿತಿ ಏನು ಎಂದು ಪ್ರಶ್ನಿಸಿ, ಈ ವಿಚಾರವಾಗಿ ಹೈಕೋರ್ಟ್ ನ ಚೀಫ್ ಜಸ್ಟಿಸ್ ತನಿಖೆಗೆ ಆದೇಶ ಮಾಡಬೇಕೆಂದು ಒತ್ತಾಯಿಸಿದರು.
ಪಿಎಸ್ಐ ನೇಮಕಾತಿ ಹಗರಣದಲ್ಲಿ ರಾಜ್ಯ ಸರಕಾರ ಸಣ್ಣಪುಟ್ಟ ಅಧಿಕಾರಿಗಳನ್ನು ತನಿಖೆ ನಡೆಸಿತ್ತೇ ಹೊರತು ಉನ್ನತ ಮಟ್ಟದ ಅಧಿಕಾರಿಗಳನ್ನು ತನಿಖೆ ನಡೆಸಿರಲಿಲ್ಲ. ಹೈಕೋರ್ಟ್ ಸರಕಾರ ಹಾಗೂ ಸಿಒಡಿಗೆ ಛೀಮಾರಿ ಹಾಕಿದ ಬಳಿಕ ದೊಡ್ಡ ಮಟ್ಟದ ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ ಎಂದು ಖಾದರ್ ಹೇಳಿದರು.
ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಯಾವುದೇ ಅಕ್ರಮಗಳಿಲ್ಲದೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಇಂತಹ ಉನ್ನತ ಮಟ್ಟದ ಹಗರಣವಾದ ಸಂದರ್ಭ ಇದರ ಸತ್ಯಾಸತ್ಯತೆ ಬಯಲಿಗೆಳೆಯಲು, ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಬೇಕೆ?. ಕೋವಿಡ್ ಕಾಲದಲ್ಲಿ ಲಸಿಕೆ, ಆಕ್ಸಿಜನ್, ಸಂತ್ರಸ್ತರಿಗೆ ಪರಿಹಾರ ನೀಡಲು ಕೋರ್ಟ್ ನಿರ್ದೇಶಿಸಬೇಕು. ಇದೀಗ ಇಂತಹ ಹಗರಣದ ಸಂದರ್ಭದಲ್ಲೂ ಉನ್ನತ ಮಟ್ಟದ ಅಧಿಕಾರಿಗಳ ತನಿಖೆ ನಡೆಸಲು ಕೋರ್ಟ್ ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
PublicNext
08/07/2022 03:06 pm