ಉಳ್ಳಾಲ: ಸೋಮೇಶ್ವರ, ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರತೆಗೆ ಅಕ್ರಮ ರೆಸಾರ್ಟ್ ಒಂದು ಕೊಚ್ಚಿ ಹೋಗುವ ಭೀತಿಯಲ್ಲಿದ್ದು, ನಾನು ತಾಲೂಕು ಕಚೇರಿಗೆ 3 ಕಂಪ್ಯೂಟರ್, ಟೇಬಲ್, ಜೆರಾಕ್ಸ್ ಮೆಷಿನ್ ಇತ್ಯಾದಿ ಕೊಡಿಸಿದ್ರೂ ತಹಶೀಲ್ದಾರ್ ಮಾತ್ರ ಗೆಸ್ಟ್ ಹೌಸ್ ರಕ್ಷಿಸಲು ಬಿಡುತ್ತಿಲ್ಲ ಎಂದು ರೆಸಾರ್ಟ್ ಮಾಲೀಕರೊಬ್ಬರು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಲ್ಲಿ ಅಲವತ್ತುಕೊಂಡಿದ್ದಾರೆ!
ಮಂಗಳವಾರ ಬಿ.ಕೆ. ಹರಿಪ್ರಸಾದ್, ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದ ಕಡಲ್ಕೊರೆತ ವೀಕ್ಷಣೆಗೆ ಬಂದಾಗ ಗೆಸ್ಟ್ ಹೌಸ್ ಮಾಲೀಕ ಅಬ್ದುಲ್ಲ ಟಿ. ಎಂಬವರು ಈ ರೀತಿ ಅಳಲು ತೋಡಿಕೊಂಡಿದ್ದಾರೆ. ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರತೆಗೆ ಬೀಚ್ ರಸ್ತೆ, ಮನೆಗಳು ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ. ಈ ಮಧ್ಯೆ ಇಲ್ಲಿನ ವಿಟಮಿನ್ ಸೀ (vitamin sea) ಎಂಬ ರೆಸಾರ್ಟ್ ಕೂಡ ಬಹುತೇಕ ಸಮುದ್ರ ಪಾಲಾಗುವ ಭೀತಿಯಲ್ಲಿದ್ದು ಅದರ ಮಾಲೀಕರು ಸಮುದ್ರ ತೀರಕ್ಕೆ ಕಲ್ಲು, ಮರಳು ಮೂಟೆಗಳನ್ನಿರಿಸಿ ರಕ್ಷಣೆಗೆ ಮುಂದಾಗಿದ್ದಾರೆ.
ಸಿಆರ್ ಝಡ್ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ರಕ್ಷಣೆಗೆ ಖಾಸಗಿಯವರು ಕಾಮಗಾರಿ ನಡೆಸುತ್ತಿರುವ ವಿರುದ್ಧ ಸ್ಥಳೀಯರಾದ ಸುಖೇಶ್ ಉಚ್ಚಿಲ್ ಎಂಬವರು ಅನೇಕ ಬಾರಿ ಉಳ್ಳಾಲ ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ಫೋನ್ ಮುಖೇನ ದೂರು ನೀಡಿದ್ದು ತಹಶೀಲ್ದಾರ್ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರಂತೆ.
ಈ ಎಲ್ಲ ಬೆಳವಣಿಗೆಯಿಂದ ರೆಸಾರ್ಟ್ ಮಾಲೀಕ ಕಂಗೆಟ್ಟಿದ್ದು ಬಿ.ಕೆ.ಹರಿಪ್ರಸಾದ್ ಎದುರಲ್ಲಿ ಅಲವತ್ತು ತೋಡಿಕೊಂಡಿದ್ದಾರೆ. ಉಚ್ಚಿಲ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್ ಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು ಅಧಿಕಾರಿ ವರ್ಗದ ಆಶೀರ್ವಾದವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾ ಬಂದಿದ್ದಾರೆ.
ಇದೀಗ ರೆಸಾರ್ಟ್ ಮಾಲೀಕರೇ ತಾನು ತಾಲೂಕು ಕಚೇರಿಗೆ ಸೌಲಭ್ಯ ನೀಡಿದ್ದಾಗಿ ವಿಪಕ್ಷ ನಾಯಕರಲ್ಲೇ ಹೇಳಿದ್ದು, ತಹಶೀಲ್ದಾರ್ ಮುಜುಗರ ಪಡುವಂತಾಯಿತು. ತಾಲೂಕು ಕಚೇರಿಗಳಿಗೆ ಇಂತಹ ರೆಸಾರ್ಟ್ ಮಾಲೀಕರು ಪರಿಕರ ಖರೀದಿಸಿ ಕೊಡುವ ಅಗತ್ಯತೆ ಏನಿತ್ತು? ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.
Kshetra Samachara
20/07/2022 09:50 pm