ಉಡುಪಿ: ಶಿವಮೊಗ್ಗಕ್ಕೆ ಉಗ್ರರ ಪ್ರವೇಶವಾಗಿದೆ ಎಂದು ಕೇಳಿ ನಮಗೆ ತೀವ್ರ ಖೇದವಾಗಿದೆ. ಮಂಗಳೂರು, ಉಡುಪಿ ಭಾಗದಲ್ಲೂ ಇಂತಹ ಚಟುವಟಿಕೆ ನಡೆದಿದೆ. ಸ್ಯಾಟಲೈಟ್ ಫೋನ್ ಗಳ ಮೂಲಕ ಸಂಭಾಷಣೆ ನಡೆಯುವುದು ನಮ್ಮ ಗಮನಕ್ಕೆ ಬಂದಿತ್ತು. ನಿಖರವಾದ ಮಾಹಿತಿಗಳ ಜೊತೆಗೆ ಇದನ್ನು ಪರಿಶೀಲನೆ ಮಾಡಬೇಕು. ಪ್ರಕರಣದಲ್ಲಿ ಹತ್ತು ಹಲವು ಜನ ಭಾಗಿ ಆಗಿರುವ ಸಾಧ್ಯತೆ ಇದೆ ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿಮಮೊಗ್ಗದಲ್ಲಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉಗ್ರರ ವಿರುದ್ಧ ಕೂಂಬಿಂಗ್ ಮಾದರಿಯಲ್ಲಿ ಪರಿಶೀಲನೆ ಆಗಬೇಕು. ಸಮಾಜದ ಶಾಂತಿ ಕದಡುವವರನ್ನು ಉಗ್ರವಾಗಿ ಶಿಕ್ಷಿಸಬೇಕು. ಉಗ್ರರಿಂದ ಸಮಾಜದಲ್ಲಿ ಯಾರಿಗೂ ನೆಮ್ಮದಿ ಇಲ್ಲ, ಸಮಾಜದ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಲಿ. ಯಾವುದೇ ಕೋಮಿನ ಬಣ್ಣ ನೀಡದೆ ಇದನ್ನು ನಿಗ್ರಹ ಮಾಡಬೇಕು ಎಂದು ಹೇಳಿದರು. ದೇಶದ ಯಾವುದೇ ಭಾಗದಲ್ಲೂ ಉಗ್ರರ ಕಾರ್ಯ ನೆರಳು ಹಾಯಬಾರದು ಎಂದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
22/09/2022 12:33 pm